ಗದಗ: ಸ್ನೇಹಿತನ ಮೇಲಿನ ನಂಬಿಕೆಯೇ ವ್ಯಕ್ತಿಯೊಬ್ಬನ ಜೀವ ತೆಗೆದ ದಾರುಣ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ವ್ಯವಹಾರಕ್ಕಾಗಿ ಒಪ್ಪಿಸಿದ್ದ ಕಡಲೆ ಕಾಳಿನ ಹಣವನ್ನು ತಾನೇ ಇಟ್ಟುಕೊಂಡು, ಆ ಹಣವನ್ನು ಮರಳಿಸಬೇಕಾದ ಸಂದರ್ಭ ಎದುರಾದಾಗ ಆಪ್ತ ಗೆಳೆಯನನ್ನೇ ಕೊಡಲಿಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಪ್ರಕರಣವನ್ನು ನರಗುಂದ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.
ಘಟನೆಯ ವಿವರ:
ಆತ್ಮೀಯ ಸ್ನೇಹಿತನನ್ನು ಸಂಪೂರ್ಣವಾಗಿ ನಂಬಿ ವ್ಯಕ್ತಿಯೊಬ್ಬರು ತಮ್ಮ 45 ಕ್ವಿಂಟಾಲ್ ಕಡಲೆ ಕಾಳನ್ನು ವ್ಯವಹಾರಕ್ಕಾಗಿ ಒಪ್ಪಿಸಿದ್ದರು. ಆದರೆ, ಕಡಲೆ ಮಾರಾಟ ಮಾಡಿ ಬಂದ ಭಾರಿ ಮೊತ್ತದ ಹಣವನ್ನು ಆರೋಪಿ ಸ್ನೇಹಿತ, ಮೂಲ ಮಾಲೀಕನಿಗೆ ತಿಳಿಯದಂತೆ ಸ್ವಂತ ಕೆಲಸಗಳಿಗೆ ಬಳಸಿ ಮುಗಿಸಿದ್ದ.
ನಂತರ ಕಡಲೆ ಮಾರಾಟದ ಹಣವನ್ನು ವಾಪಸ್ ನೀಡುವಂತೆ ಸ್ನೇಹಿತ ಒತ್ತಾಯಪಡಿಸಲು ಶುರು ಮಾಡಿದ್ದಾನೆ. ದಿನ ಕಳೆದಂತೆ ಹಣ ಮರಳಿಸಬೇಕಾದ ಅನಿವಾರ್ಯತೆ ಮತ್ತು ಒತ್ತಡ ಹೆಚ್ಚಾದಾಗ, ಹೇಗಾದರೂ ಮಾಡಿ ಸ್ನೇಹಿತನ ಕಥೆ ಮುಗಿಸಿದರೆ ಸಾಲ ತೀರಿಸುವ ಪ್ರಮೇಯವೇ ಬರುವುದಿಲ್ಲ ಎಂಬ ವಿಕೃತ ಯೋಚನೆಗೆ ಆರೋಪಿ ಜಾರಿದ್ದಾನೆ.
ಕೊಲೆಗೆ ಸಂಚು ಮತ್ತು ಕೃತ್ಯ:
ಯೋಜನೆಯಂತೆ ಸ್ನೇಹಿತನನ್ನು “ಹೊಲಕ್ಕೆ ಹೋಗಿ ಬರೋಣ ಬಾ” ಎಂದು ನಂಬಿಸಿ ಬೈಕ್‌ನಲ್ಲಿ ಕರೆದೊಯ್ದಿದ್ದಾನೆ. ಯಾರಿಗೂ ಸಂಶಯ ಬಾರದಂತೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ತನ್ನಲ್ಲಿದ್ದ ಕೊಡಲಿಯಿಂದ ತಲೆಗೆ ತೀವ್ರವಾಗಿ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಯಾರಿಗೂ ಸುಳಿವೂ ಸಿಗದಂತೆ ಮೃತದೇಹವನ್ನು ರಹಸ್ಯವಾಗಿ ಎತ್ತಿಕೊಂಡು ಹೋಗಿ ಕಾಲುವೆಯ ಪೈಪ್ ಒಳಗೆ ತಳ್ಳಿ ಅಡಗಿಸಿಟ್ಟು ಪರಾರಿಯಾಗಿದ್ದ.
ಪೊಲೀಸರ ತನಿಖೆ ಮತ್ತು ಭೇದನೆ:
ವ್ಯಕ್ತಿ ನಾಪತ್ತೆಯಾಗಿರುವ ಕುರಿತು ಕುಟುಂಬಸ್ಥರು ಹಾಗೂ ಸ್ಥಳೀಯರು ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ಗದಗ ಜಿಲ್ಲೆಯ ನರಗುಂದ ಪೊಲೀಸರು, ತಾಂತ್ರಿಕ ಮಾಹಿತಿ ಹಾಗೂ ಸ್ಥಳೀಯ ಸುಳಿವುಗಳ ಆಧಾರದ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಅಂತಿಮವಾಗಿ ಪ್ರಕರಣದ ಜಾರುಹಿಡಿದ ಪೊಲೀಸರು ಕೃತ್ಯ ಎಸಗಿರುವ ಹಂತಕ ಸ್ನೇಹಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ವಿಚಾರಣೆ ವೇಳೆ ಸತ್ಯ ಹೊರಬಂದಿದೆ. ಹಣದಾಸೆಗೆ ಹಸಿ ಹಸಿಯಾಗಿ ಜೀವ ತೆಗೆದ ಈ ಅಮಾನವೀಯ ಕೃತ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.