ಗಂಗಾವತಿ: ಸಾಲದ ಹೊರೆ ತೀರಿಸಲು ಮತ್ತು ವಿಮೆಯ ಹಣ ಪಡೆದುಕೊಳ್ಳುವ ದುರುದ್ದೇಶದಿಂದ ಪತ್ನಿಯೇ ತನ್ನ ಪತಿಯನ್ನು ಇತರರ ಸಹಾಯದಿಂದ ಕೊಲೆ ಮಾಡಿರುವ ಆಘಾತಕಾರಿ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮುಷ್ಟೂರು ಕ್ಯಾಂಪ್ ನಿವಾಸಿ ರಾಘವೇಂದ್ರ (45) ಕೊಲೆಯಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ರಾಘವೇಂದ್ರನ ಪತ್ನಿ ಉಮಾ, ಈಕೆಯ ಸಂಬಂಧಿ ಶಿವಾಜಿ ಹಾಗೂ ಕಲೀಲ್ ಸಾಬ್ ಎಂಬುವವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕೊಲೆಗೆ ಅಸಲಿ ಕಾರಣವೇನು?
ಮೃತ ರಾಘವೇಂದ್ರ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದನು. ಪತಿ ಮೃತಪಟ್ಟರೆ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಪಡೆದ ಸಾಲ ಮನ್ನಾ ಆಗಬಹುದು ಹಾಗೂ ವಿಮೆ ಹಣ ಕೈ ಸೇರಬಹುದು ಎಂಬ ದುರಾಸೆಯಿಂದ ಪತ್ನಿ ಉಮಾ ಈ ಕೃತ್ಯಕ್ಕೆ ಸಂಚು ರೂಪಿಸಿದ್ದಳು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಯೋಜನೆಯಂತೆ, ಸೆಪ್ಟೆಂಬರ್ 7ರಂದೇ ಗಂಗಾವತಿಗೆ ಆಗಮಿಸಿದ್ದ ಉಮಾ, ವಿಮೆ ಹಣ ಪಾವತಿ ಮತ್ತು ಸಾಲ ಮನ್ನಾ ಆಗುವ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಕಲೆಹಾಕಿದ್ದಳು. ಅದೇ ದಿನ ರಾತ್ರಿ ಮುಷ್ಟೂರು ಕ್ಯಾಂಪ್‌ನಿಂದ ಹೆಬ್ಬಾಳಕ್ಕೆ ಹೋಗುವ ಮಾರ್ಗದಲ್ಲಿ ರಾಘವೇಂದ್ರನ ಮೇಲೆ ಕಟ್ಟಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ತನಿಖೆ ಚುರುಕು:
ಸಾಲ ಮನ್ನಾ ಮತ್ತು ವಿಮೆ ಹಣದ ಆಸೆಗೆ ಸ್ವಂತ ಪತಿಯ ಬಲಿ ಪಡೆದ ಈ ಕೃತ್ಯವು ಸ್ಥಳೀಯ ಸಾರ್ವಜನಿಕರಲ್ಲಿ ತೀವ್ರ ಆಘಾತ ಹಾಗೂ ಆಕ್ರೋಶ ಮೂಡಿಸಿದೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದು, ಕೃತ್ಯದಲ್ಲಿ ಭಾಗಿಯಾಗಿರುವ ನಂತರದ ನಂಟಿನ ಕುರಿತು ಸಮಗ್ರ ತನಿಖೆ ಮುಂದುವರೆದಿದೆ.