ಹಾನಗಲ್ : ತೋಟದ ಮನೆಯ ಬಳಿ ಮಲಗಿದ್ದ ನಾಯಿಯ ಮೇಲೆ ಚಿರತೆಯೊಂದು ದಿಢೀರ್ ದಾಳಿ ನಡೆಸಿ, ಅದನ್ನು ಹೊತ್ತೊಯ್ದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಹೊರವಲಯದ ಬೆಳವತ್ತಿ ಗುಡ್ಡದ ಬಳಿ ನಡೆದಿದೆ.
ಗ್ರಾಮದ ರೈತ ರಾಮಣ್ಣ ಕಲ್ಲಾಪುರ ಅವರಿಗೆ ಸೇರಿದ ತೋಟದ ಮನೆಯ ಅಂಗಳದಲ್ಲಿ ನಾಯಿ ಮಲಗಿತ್ತು. ರಾತ್ರಿ ವೇಳೆ ಹೊಂಚು ಹಾಕಿ ಬಂದ ಚಿರತೆ ಏಕಾಏಕಿ ದಾಳಿ ನಡೆಸಿ ನಾಯಿಯನ್ನು ಹೊತ್ತೊಯ್ದಿದೆ. ಈ ಇಡೀ ಭೀಕರ ದೃಶ್ಯ ತೋಟದ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಆತಂಕದಲ್ಲಿ ರೈತರು ಹಾಗೂ ಗ್ರಾಮಸ್ಥರು:
ಗುಡ್ಡದ ಸುತ್ತಮುತ್ತ ಹಾಗೂ ತೋಟದ ಮನೆಗಳ ಬಳಿ ಚಿರತೆ ನಿರಂತರವಾಗಿ ಸಂಚಾರ ಮಾಡುತ್ತಿರುವುದರಿಂದ ಹೊಲದ ಮನೆಗಳಲ್ಲಿ ವಾಸಿಸುವ ರೈತರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ತೀವ್ರ ಆತಂಕ ಆವರಿಸಿದೆ. ಚಿರತೆಯ ಭಯದಿಂದಾಗಿ ರಾತ್ರಿ ವೇಳೆ ಹೊಲ-ಗದ್ದೆಗಳಿಗೆ ನೀರು ಹಾಯಿಸಲು ಹಾಗೂ ಕೆಲಸಕ್ಕೆ ತೆರಳಲು ಕೃಷಿಕರು ಹಿಂಜರಿಯುವಂತಾಗಿದೆ.
ಬೋನು ಅಳವಡಿಸಲು ಆಗ್ರಹ:
ಚಿರತೆ ಸಂಚಾರದ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೂಡಲೇ ಗ್ರಾಮದ ಸುತ್ತಮುತ್ತ ಬೋನು ಅಳವಡಿಸಿ, ಚಿರತೆಯನ್ನು ಸೆರೆಹಿಡಿದು ಸಾರ್ವಜನಿಕರ ಆತಂಕವನ್ನು ದೂರ ಮಾಡಬೇಕೆಂದು ಗ್ರಾಮಸ್ಥರು ಬಲವಾಗಿ ಒತ್ತಾಯಿಸಿದ್ದಾರೆ.