ಹಾಸನ: ತಾಲೂಕಿನ ಗಾಡೇನಹಳ್ಳಿಯಲ್ಲಿರುವ ಕೃಷಿ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ರಾತ್ರಿ ನೀಡಿದ ಆಹಾರದಲ್ಲಿ ಹಲ್ಲಿ ಬಿದ್ದಿದ್ದು, ಅದನ್ನು ಸೇವಿಸಿದ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಫುಡ್ ಪಾಯಿಸನ್ (ಆಹಾರ ವಿಷಪೂರಿತ) ಆಗಿ ತೀವ್ರ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ನಿನ್ನೆ ರಾತ್ರಿ ಎಂದಿನಂತೆ ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ಊಟ ಮಾಡುತ್ತಿದ್ದಾಗ, ಆಹಾರದಲ್ಲಿ ಹಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಅಷ್ಟರಗಾಗಲೇ ಅದೇ ಆಹಾರವನ್ನು ಸೇವಿಸಿದ್ದ ಹಲವು ವಿದ್ಯಾರ್ಥಿನಿಯರಲ್ಲಿ ವಾಂತಿ, ತಲೆಸುತ್ತು ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಕಾಲೇಜು ಸಿಬ್ಬಂದಿ ಅಸ್ವಸ್ಥಗೊಂಡ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ಹಾಸನದ ಹಿಮ್ಸ್ (HIMS) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸದ್ಯ ವಿದ್ಯಾರ್ಥಿನಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳಪೆ ಆಹಾರ ವಿತರಣೆ: ಹಾಸ್ಟೆಲ್‌ನಲ್ಲಿ ನಿರಂತರವಾಗಿ ಕಳಪೆ ಹಾಗೂ ಗುಣಮಟ್ಟವಿಲ್ಲದ ಆಹಾರವನ್ನು ವಿತರಿಸಲಾಗುತ್ತಿದೆ. ಸ್ವಚ್ಛತೆಗೆ ಯಾವುದೇ ಆದ್ಯತೆ ನೀಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಆಡಳಿತ ಮಂಡಳಿಯ ನಿರ್ಲಕ್ಷ್ಯ: ಈ ಹಿಂದೆಯೂ ಕೂಡ ಆಹಾರದ ಗುಣಮಟ್ಟದ ಕುರಿತು ಕಾಲೇಜು ಮಂಡಳಿಗೆ ಅನೇಕ ಬಾರಿ ದೂರು ನೀಡಲಾಗಿತ್ತು. ಆದರೆ ಮಂಡಳಿಯು ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದೇ ಇಂದಿನ ಈ ಘಟನೆಗೆ ನೇರ ಕಾರಣ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಅಡುಗೆ ಸಿಬ್ಬಂದಿ ವಿರುದ್ಧ ಆಕ್ರೋಶ: ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಅಡುಗೆ ತಯಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಕೂಡಲೇ ಹಾಸ್ಟೆಲ್‌ನ ಅಡುಗೆ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.