ಹೈದರಾಬಾದ್: ಯೂಟ್ಯೂಬ್ (YouTube) ವಿಡಿಯೋಗಳನ್ನು ನೋಡಿ ಅಕ್ರಮವಾಗಿ ಮನೆಯಲ್ಲಿಯೇ ವೈನ್ ತಯಾರಿಸಿ ಮಾರಾಟ ಮಾಡುತ್ತಿದ್ದ ಖದೀಮನೊಬ್ಬನನ್ನು ಅಬಕಾರಿ ಇಲಾಖೆ ಹಾಗೂ ಮಲ್ಕಜ್‌ಗಿರಿ ಜಿಲ್ಲಾ ಕಾರ್ಯಪಡೆ (Task Force) ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 1.5 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ವೈನ್ ಹಾಗೂ ತಯಾರಿಕಾ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ಆಂಟೋನಿ ಪೀಟರ್ ಎಂದು ಗುರುತಿಸಲಾಗಿದ್ದು, ಈತ ಯಾವುದೇ ಅಧಿಕೃತ ಪರವಾನಗಿ (Licence) ಇಲ್ಲದೆ ಕಳೆದ ಒಂದು ವರ್ಷದಿಂದ ಈ ದಂಧೆಯನ್ನು ರಾಜಾರೋಷವಾಗಿ ನಡೆಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ವಿಚಾರಣೆಯ ವೇಳೆ ಆಂಟೋನಿ ಪೀಟರ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ಸ್ವಯಂ ಉದ್ಯೋಗದ ಹೆಸರಿನಲ್ಲಿ ಸುಲಭವಾಗಿ ಹಣ ಗಳಿಸಲು ಯೋಜಿಸಿದ್ದ ಈತ, ಯೂಟ್ಯೂಬ್‌ನಲ್ಲಿ ವೈನ್ ತಯಾರಿಸುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕಲಿತುಕೊಂಡಿದ್ದ. ದ್ರಾಕ್ಷಿ, ಅನಾನಸ್, ಪೇರಲ, ಸಿಹಿ ನಿಂಬೆ (ಮೂಸಂಬಿ), ಸಪೋಟಾ, ಬಾಳೆಹಣ್ಣು ಮತ್ತು ವೀಳ್ಯದೆಲೆಗಳನ್ನು ಬಳಸಿ ಬರೋಬ್ಬರಿ ಏಳು ವಿಭಿನ್ನ ಶೈಲಿಯ ವೈನ್‌ಗಳನ್ನು ಈತ ಅಕ್ರಮವಾಗಿ ಉತ್ಪಾದಿಸುತ್ತಿದ್ದ.
ಹಣ್ಣುಗಳನ್ನು ಸಕ್ಕರೆ ಮತ್ತು ಗೋಧಿಯೊಂದಿಗೆ ಮಿಶ್ರಣ ಮಾಡಿ ಸುಮಾರು 15 ದಿನಗಳ ಕಾಲ ಹುದುಗಿಸಿ (Fermentation), ತದನಂತರ ಅದನ್ನು ಫಿಲ್ಟರ್ ಮಾಡಿ ಬಾಟಲಿಗಳಿಗೆ ತುಂಬಿಸುತ್ತಿದ್ದ. ಹೀಗೆ ಸಿದ್ಧವಾದ 750 ಮಿಲಿ ಲೀಟರ್‌ನ ವೈನ್ ಬಾಟಲಿಯನ್ನು ತಲಾ ₹300 ರಂತೆ ನೆರೆಡ್‌ಮೆಟ್, ಸಿಕಂದರಾಬಾದ್ ಮತ್ತು ಕಪ್ರಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಮಲ್ಕಜ್‌ಗಿರಿ ಜಿಲ್ಲಾ ಕಾರ್ಯಪಡೆ ಅಧಿಕಾರಿಗಳು, ಸ್ಥಳದಲ್ಲಿದ್ದ 377.7 ಲೀಟರ್ ವೈನ್, 502 ಖಾಲಿ ಹಾಗೂ ತುಂಬಿದ ಬಾಟಲಿಗಳು ಮತ್ತು ವೈನ್ ಉತ್ಪಾದನಾ ಪ್ರಕ್ರಿಯೆಗೆ ಬಳಸುತ್ತಿದ್ದ ಆಧುನಿಕ ಉಪಕರಣಗಳನ್ನು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಳ್ಳಲಾದ ಒಟ್ಟು ದಾಸ್ತಾನಿನ ಮೌಲ್ಯ ಸುಮಾರು ₹1.5 ಲಕ್ಷ ಎಂದು ಅಂದಾಜಿಸಲಾಗಿದೆ.
ಬಂಧಿತ ಆರೋಪಿ ಆಂಟೋನಿ ಪೀಟರ್ ಹಾಗೂ ವಶಪಡಿಸಿಕೊಂಡ ಎಲ್ಲಾ ಮಾದಕ ದ್ರವ್ಯಗಳನ್ನು ಮುಂದಿನ ಕಾನೂನು ಕ್ರಮ ಹಾಗೂ ಹೆಚ್ಚಿನ ತನಿಖೆಗಾಗಿ ಕಪ್ರಾ ಅಬಕಾರಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಯಾವುದೇ ಪರವಾನಗಿ ಇಲ್ಲದೆ ಇಂತಹ ಮಾದಕ ಪೇಯಗಳನ್ನು ತಯಾರಿಸುವುದು ಮತ್ತು ಮಾರಾಟ ಮಾಡುವುದು ಕಾನೂನುಬಾಹಿರ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕರ ಎಂದು ಅಬಕಾರಿ ಇಲಾಖೆ ಎಚ್ಚರಿಸಿದೆ.