Skip to main content

Police Roundup

ಮನೆ ರಿಪೇರಿ ಮಾಡುತ್ತಿದ್ದ ಕೆಲಸಗಾರರಿಗೆ ಸಿಕ್ತು 100 ಕೋಟಿ ಮೌಲ್ಯದ ಚಿನ್ನ: ಗೋಡೆಯಿಂದ ಹೊರಬಂತು ಬಂಗಾರದ ನಾಣ್ಯಗಳ ನಿಧಿ!

Share News

ಬೆಲ್ಜಿಯಂ: ಹಳೆಯ ಮನೆಯೊಂದರ ನವೀಕರಣ ಕಾರ್ಯದಲ್ಲಿ ನಿರತರಾಗಿದ್ದ ಕಾರ್ಮಿಕರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಅಪಾರ ಪ್ರಮಾಣದ ಚಿನ್ನ ಮತ್ತು ನಾಣ್ಯಗಳ ನಿಧಿ ಪತ್ತೆಯಾಗಿರುವ ರೋಚಕ ಘಟನೆ ಬೆಲ್ಜಿಯಂನ ಈಸ್ಟ್ ಫ್ಲಾಂಡರ್ಸ್‌ನಲ್ಲಿ ನಡೆದಿದೆ.

 

​ಇಲ್ಲಿನ ಹಳೆಯ ಕಟ್ಟಡವೊಂದರಲ್ಲಿ ಹೊಸ ಒಳಚರಂಡಿ ಕೊಳವೆಗಳನ್ನು ಅಳವಡಿಸಲು ಅಡಿಪಾಯ ಕೊರೆಯುವ ಕೆಲಸ ನಡೆಯುತ್ತಿತ್ತು. ಈ ವೇಳೆ ಗೋಡೆಯ ಒಳಗಿನಿಂದ ಹಳದಿ ಬಣ್ಣದ ನಾಣ್ಯಗಳು ಹೊರಬರಲು ಪ್ರಾರಂಭಿಸಿವೆ. ಆರಂಭದಲ್ಲಿ ಇವು ಸಾಮಾನ್ಯ 1 ಯೂರೋ ನಾಣ್ಯಗಳಿರಬಹುದು ಎಂದು ಭಾವಿಸಿದ್ದ ಕಾರ್ಮಿಕರಿಗೆ, ಕೊರೆಯುತ್ತಿದ್ದಂತೆ ಚಿನ್ನದ ಗಟ್ಟಿಗಳು (Gold Bars) ಮತ್ತು ಪುರಾತನ ನಾಣ್ಯಗಳು ಪತ್ತೆಯಾಗಿ ಅಚ್ಚರಿ ಮೂಡಿಸಿವೆ.

 

​100 ಕೋಟಿ ರೂಪಾಯಿ ಮೌಲ್ಯದ ನಿಧಿ:

ಸಂಶೋಧನೆಯ ಪ್ರಕಾರ ಪತ್ತೆಯಾದ ಚಿನ್ನದ ಮೌಲ್ಯ ಸುಮಾರು 9 ಮಿಲಿಯನ್ ಯುರೋಗಳು, ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸರಿಸುಮಾರು 100 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ನಿಧಿ ಪತ್ತೆ ಮಾಡಿದವರಲ್ಲಿ ಬೇಸಿಗೆ ರಜೆಯ ಕೆಲಸಕ್ಕೆ ಬಂದಿದ್ದ 18 ವರ್ಷದ ವಿದ್ಯಾರ್ಥಿ ಕೋಬ್ ಕೂಡ ಒಬ್ಬನಾಗಿದ್ದು, ಆತ ಸಂಪೂರ್ಣ ತಟ್ಟೆಯಷ್ಟು ಚಿನ್ನದ ನಾಣ್ಯಗಳನ್ನು ಹೊರತೆಗೆದಿದ್ದಾನೆ.

 

​”ಮೊದಲು ನಮಗೆ ಅಚ್ಚರಿಯಾಯಿತು. ಸಾಮಾನ್ಯ ನಾಣ್ಯಗಳಿರಬಹುದು ಅಂದುಕೊಂಡಿದ್ದೆವು, ಆದರೆ ಚಿನ್ನದ ಗಟ್ಟಿ ಕಂಡಾಗ ಇದು ಗಂಭೀರವಾದ ವಿಚಾರ ಎಂದು ತಿಳಿಯಿತು” ಎಂದು ಕೋಬ್ ಬೆಲ್ಜಿಯಂನ VRT ಟಿವಿ ಚಾನೆಲ್‌ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ.

 

​ಪ್ರಾಮಾಣಿಕತೆ ಮೆರೆದ ಕಾರ್ಮಿಕರು:

ಅಷ್ಟೊಂದು ಪ್ರಮಾಣದ ಚಿನ್ನವನ್ನು ಸುರಕ್ಷಿತವಾಗಿ ಇಡುವುದು ಅಸಾಧ್ಯವಾಗಿದ್ದರಿಂದ ಹಾಗೂ ಯಾವುದೇ ಅಕ್ರಮಕ್ಕೆ ಆಸ್ಪದ ನೀಡಬಾರದೆಂಬ ಉದ್ದೇಶದಿಂದ, ಸ್ಥಳದಲ್ಲಿದ್ದ ಮ್ಯಾನೇಜರ್ ಮಾರಿಯೋ ಹಾಗೂ ಕಾರ್ಮಿಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಇಡೀ ನಿಧಿಯನ್ನು ವಶಕ್ಕೆ ಪಡೆದು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin