ಕೋಲಾರ: ನಗರದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದ ವೇಳೆ ಸಾರ್ವಜನಿಕವಾಗಿ ತಲ್ವಾರ್ ಪ್ರದರ್ಶಿಸಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದ ಹಿನ್ನೆಲೆಯಲ್ಲಿ ಕೋಲಾರ ನಗರ ಠಾಣೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ನಗರದ ಮಹಾಲಕ್ಷ್ಮಿ ಬಡಾವಣೆ ನಿವಾಸಿ ಅಹಮದ್ ಪೀರ್ ಅಲಿಯಾಸ್ ಜಾವಾ ಬಂಧಿತ ಆರೋಪಿ.
ಉಡುಗೊರೆಯಾಗಿ ತಲ್ವಾರ್ ನೀಡಿದ್ದ ಆರೋಪಿ:
ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತಿದ್ದ ಸಮಯದಲ್ಲಿ ಆರೋಪಿ ಅಹಮದ್ ಪೀರ್, ಮುಸ್ತಫಾ ಎಂಬುವರಿಗೆ ಉಡುಗೊರೆ (GIFT) ರೂಪದಲ್ಲಿ ತಲ್ವಾರ್ ನೀಡಿದ್ದ ಎನ್ನಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಮಾರಕ ಆಯುಧ ಪ್ರದರ್ಶಿಸಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾದ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಬಳಿಯಿದ್ದ ತಲ್ವಾರ್ ಅನ್ನು ವಶಪಡಿಸಿಕೊಂಡಿದ್ದಾರೆ.
ಅಜ್ಮೀರ್ನಿಂದ ತಂದಿದ್ದ ಆಯುಧ:
ಆರೋಪಿ ಅಹಮದ್ ಪೀರ್ ಈ ತಲ್ವಾರ್ ಅನ್ನು ಅಜ್ಮೀರ್ನಿಂದ ಖರೀದಿಸಿ ತಂದಿದ್ದ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ನಗರ ಠಾಣೆ ಪೊಲೀಸರು, ಈ ಕುರಿತು ಹೆಚ್ಚಿನ ವಿಚಾರಣೆ ಹಾಗೂ ತನಿಖೆಯನ್ನು ಮುಂದುವರಿಸಿದ್ದಾರೆ.