ಕೆ.ಆರ್.ಪೇಟೆ: ತಾಲೂಕು ಕಚೇರಿಗೆ ಆಗಮಿಸಿದ್ದ ವೃದ್ಧ ರೈತ ಅಣ್ಣಯ್ಯ ಎಂಬುವವರನ್ನು ಸಾರ್ವಜನಿಕವಾಗಿ ಏಕವಚನದಲ್ಲಿ ನಿಂದಿಸಿ, ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೆ.ಆರ್.ಪೇಟೆ ತಹಶೀಲ್ದಾರ್ ಶ್ರೇಯಸ್ ಅವರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಕರವೇ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು ಅವರ ನೇತೃತ್ವದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಹಶೀಲ್ದಾರ್ ಶ್ರೇಯಸ್ ಅವರ ರೈತ ವಿರೋಧಿ ಧೋರಣೆಯನ್ನು ತೀವ್ರವಾಗಿ ಖಂಡಿಸಲಾಯಿತು.
”ರೈತರ ಸಮಸ್ಯೆ ಆಲಿಸಿ ಪರಿಹರಿಸಬೇಕಾದ ಅಧಿಕಾರಿ, ದೊರೆಯಂತೆ ವರ್ತಿಸುತ್ತಿರುವುದು ಖಂಡನೀಯ. ರೈತರೇ ಈ ದೇಶದ ಬೆನ್ನೆಲುಬು. ಇಂತಹ ವೃದ್ಧ ರೈತರನ್ನು ಅವಮಾನಿಸುವ ಯಾವುದೇ ಅಧಿಕಾರಿಗೆ ಕಚೇರಿಯಲ್ಲಿ ಇರಲು ಅರ್ಹತೆಯಿಲ್ಲ. ಜಿಲ್ಲಾಧಿಕಾರಿಗಳು ತಕ್ಷಣವೇ ತಹಶೀಲ್ದಾರ್ ಶ್ರೇಯಸ್ ಅವರನ್ನು ಅಮಾನತುಗೊಳಿಸಬೇಕು.”
— ಡಿ.ಎಸ್.ವೇಣು, ಕರವೇ ಜಿಲ್ಲಾಧ್ಯಕ್ಷ
ಅಮಾನತುಗೊಳಿಸದಿದ್ದಲ್ಲಿ ತಾಲೂಕು ಕಚೇರಿಯ ಮುಂದೆ ಬೃಹತ್ ಧರಣಿ ಸತ್ಯಾಗ್ರಹ ಹಾಗೂ ರಸ್ತೆ ತಡೆ ಹೋರಾಟ ನಡೆಸಲಾಗುವುದು ಎಂದು ಅವರು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯ ಬಳಿಕ ಕಚೇರಿ ಮುಂಭಾಗ ಜಮಾಯಿಸಿದ ಕರವೇ ಕಾರ್ಯಕರ್ತರು ಹಾಗೂ ರೈತರು, “ತಹಶೀಲ್ದಾರ್ ಶ್ರೇಯಸ್ ಗೋ ಬ್ಯಾಕ್”, “ರೈತ ವಿರೋಧಿ ಅಧಿಕಾರಿಗೆ ನಾಚಿಕೆಯಾಗಬೇಕು” ಎಂದು ಬೃಹತ್ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಕರವೇ ತಾಲೂಕು ಅಧ್ಯಕ್ಷ ಶ್ರೀನಿವಾಸ್, ದೌರ್ಜನ್ಯಕ್ಕೊಳಗಾದ ವೃದ್ಧ ರೈತ ಅಣ್ಣಯ್ಯ, ನಗರ ಘಟಕ ಅಧ್ಯಕ್ಷ ಮದನ್, ಪ್ರಮುಖರಾದ ಬೋರೇಗೌಡ, ಸ್ವಾಮಿ, ಶಿವಪ್ರಸಾದ್ ಸ್ವಾಮಿ, ಕಳಸಯ್ಯ ಸೇರಿದಂತೆ ಹಲವು ಕರವೇ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.