ಮಂಡ್ಯ / ಶ್ರೀರಂಗಪಟ್ಟಣ: ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವತಿಯಿಂದ ಶ್ರೀರಂಗಪಟ್ಟಣದ ಕೃಷ್ಣರಾಜಸಾಗರ (ಕೆಆರ್‌ಎಸ್) ಅಣೆಕಟ್ಟೆ ಬಳಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಮುಖ ನಾಯಕರ ವಾಗ್ದಾಳಿಯ ವಿವರ ಹೀಗಿದೆ:
”ಸಚಿವ ಸಂಪುಟವೇ ಮುಖ್ಯವಾಗಿದೆ” — ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ
”ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯದ ರೈತರ ಹಾಗೂ ಜನರ ಹಿತರಕ್ಷಣೆಗಿಂತ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರ ಮನೆ ಕಾಯುತ್ತಾ ಸಚಿವ ಸಂಪುಟ ವಿಸ್ತರಣೆ ಮಾಡುವುದೇ ಮುಖ್ಯವಾಗಿದೆ. ನಿಜಕ್ಕೂ ನಾಡಿನ ಜನರ ಬಗ್ಗೆ ಕಾಳಜಿ ಇದ್ದರೆ, ‘ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಹನಿ ನೀರನ್ನೂ ಬಿಡುವುದಿಲ್ಲ, ಅಗತ್ಯಬಿದ್ದರೆ ರಾಜೀನಾಮೆ ನೀಡುತ್ತೇನೆ’ ಎಂದು ಸ್ಪಷ್ಟವಾಗಿ ಹೇಳಬೇಕಿತ್ತು. ತಕ್ಷಣವೇ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಂಡು ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.”
”ಡಿಕೆಶಿ ತಮಿಳುನಾಡಿನ ನೀರುಗಂಟಿ” — ವಿಪಕ್ಷ ನಾಯಕ ಆರ್. ಅಶೋಕ್
”ಡಿ.ಕೆ. ಶಿವಕುಮಾರ್ ಅವರು ತಮಿಳುನಾಡಿನ ಜೊತೆ ಶಾಮೀಲಾಗಿ, ಆ ರಾಜ್ಯದ ‘ನೀರುಗಂಟಿ’ಯಂತೆ ಕೆಲಸ ಮಾಡುತ್ತಿದ್ದಾರೆ. ದೆಹಲಿಯಲ್ಲಿ ರಾಜಕೀಯ ಲಾಬಿಯಲ್ಲೇ ಕಾಲ ಕಳೆಯುವ ಬದಲು ಕಾನೂನು ತಜ್ಞರೊಂದಿಗೆ ಚರ್ಚಿಸಿ ರಾಜ್ಯದ ಪರ ಪ್ರಬಲ ವಾದ ಮಂಡಿಸಬೇಕಿತ್ತು. ರೈತರಿಗೆ ಬೆಳೆ ಬೆಳೆಯಬೇಡಿ ಎಂದಿರುವ ಸರ್ಕಾರ, ನಷ್ಟ ಪರಿಹಾರವನ್ನೂ ನೀಡದೆ ಹೊಣೆಗೇಡಿತನ ಪ್ರದರ್ಶಿಸುತ್ತಿದೆ.”
”ದಿಟ್ಟ ನಿರ್ಧಾರ ತಳೆದರೆ ಬಿಜೆಪಿ ಬೆಂಬಲ” — ಛಲವಾದಿ ನಾರಾಯಣಸ್ವಾಮಿ
”ಕಾವೇರಿ ನೀರು ನಿಯಂತ್ರಣ ಸಮಿತಿಗೆ (ಸಿಡಬ್ಲ್ಯೂಆರ್‌ಸಿ) ಹಾಗೂ ಪ್ರಾಧಿಕಾರಕ್ಕೆ ರಾಜ್ಯದಲ್ಲಿ ಉಂಟಾಗಿರುವ ನೀರಿನ ಅಭಾವದ ಬಗ್ಗೆ ಸೂಕ್ತ ಮಾಹಿತಿ ನೀಡಲು ಸರ್ಕಾರ ವಿಫಲವಾಗಿದೆ. ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ಸರ್ಕಾರ ದಿಟ್ಟ ನಿರ್ಧಾರ ತಳೆದರೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ.”
”ಕದ್ದುಮುಚ್ಚಿ ನೀರು ಬಿಡುವುದು ನಿಲ್ಲಲಿ” — ಸಿ.ಟಿ. ರವಿ
”ಪರಿಸ್ಥಿತಿ ಕೈಮೀರಿ ಹೋದ ಮೇಲೆ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಈಗ ರಾತ್ರೋರಾತ್ರಿ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ತಮ್ಮನ್ನು ‘ಬಂಡೆ’ ಎಂದು ಕರೆದುಕೊಳ್ಳುವ ಡಿ.ಕೆ. ಶಿವಕುಮಾರ್ ಅವರು ಈಗ ರಾಜ್ಯದ ಹಿತರಕ್ಷಣೆಗಾಗಿ ಬಂಡೆಯಂತೆ ಗಟ್ಟಿಯಾಗಿ ನಿಂತು ನೀರು ಬಿಡುವುದನ್ನು ತಡೆಯಬೇಕು.”
ಈ ಬೃಹತ್ ಪ್ರತಿಭಟನೆಯಲ್ಲಿ ಬಿಜೆಪಿಯ ಪ್ರಮುಖ ಹಿರಿಯ ನಾಯಕರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಸಾವಿರಾರು ಸಂಖ್ಯೆಯ ರೈತರು ಭಾಗವಹಿಸಿ, ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆಯ ವಿರುದ್ಧ ಶಕ್ತಿ ಪ್ರದರ್ಶನ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.