ಬೆಂಗಳೂರು: ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಹಾಗೂ ಸುಧಾರಿಸಲು ಕೇಂದ್ರ ಸರ್ಕಾರವು ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಸುಮಾರು 150 ವರ್ಷಗಳ ಹಳೆಯ ಕಾಯ್ದೆಗೆ ತಿದ್ದುಪಡಿ ತಂದು, ಡಿಜಿಟಲೀಕರಣದ ಮೂಲಕ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ ಎಂದು ಭಾರತದ ಪತ್ರಿಕಾ ನೋಂದಣಿಯ ಪ್ರಧಾನ ಮಹಾನಿರ್ದೇಶಕ (PRGI) ಯೋಗೇಶ್ ಕುಮಾರ್ ಬವೇಜಾ ತಿಳಿಸಿದರು.
ವಾರ್ತಾಸೌಧದ ಮಹಾತ್ಮ ಗಾಂಧೀ ಮಾಧ್ಯಮ ಕೇಂದ್ರದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ (ಬೆಂಗಳೂರು ಶಾಖೆ) ಹಾಗೂ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ “ಪತ್ರಿಕಾ ಮತ್ತು ನಿಯತಕಾಲಿಕೆಗಳ ನೋಂದಣಿ ಕಾಯ್ದೆ 2023” ಹಾಗೂ “ಪ್ರೆಸ್ ಸೇವಾ ಪೋರ್ಟಲ್” ಕುರಿತ ಸಂವಾದ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕಾ ನೋಂದಣಿಯಲ್ಲಿ ಪ್ರಮುಖ ಬದಲಾವಣೆಗಳು:
ಸಂಪೂರ್ಣ ಆನ್‌ಲೈನ್ ವ್ಯವಸ್ಥೆ: ‘ಪ್ರೆಸ್ ಸೇವಾ ಪೋರ್ಟಲ್’ ಮೂಲಕವೇ ಎಲ್ಲಾ ಪ್ರಕ್ರಿಯೆಗಳು ನಡೆಯಲಿದ್ದು, ಭೌತಿಕ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ. ಇದರಿಂದ ಕಾಗದಪತ್ರಗಳ ಅಲೆದಾಟ ತಪ್ಪಲಿದೆ.
ಕಾಲಮಿತಿ ಕಡಿತ: ಈ ಹಿಂದೆ ನೋಂದಣಿಗೆ ವರ್ಷಗಟ್ಟಲೆ ಕಾಯಬೇಕಿತ್ತು. ಆದರೆ ಈಗ ಅರ್ಜಿ ಸಲ್ಲಿಸಿದ 3 ತಿಂಗಳೊಳಗೆ ಹೊಸ ಪತ್ರಿಕೆಯನ್ನು ಪ್ರಾರಂಭಿಸಬಹುದು.
12 ತಿಂಗಳ ಕಾಲಾವಕಾಶ: PRGI ನಿಂದ ಸಮಗ್ರ ಪರಿಶೀಲನೆ ನಂತರ ಅಂತಿಮ ಟೈಟಲ್ (ಶೀರ್ಷಿಕೆ) ಸಿಕ್ಕ ಬಳಿಕ 12 ತಿಂಗಳೊಳಗೆ ಪತ್ರಿಕೆ ಪ್ರಕಟಣೆ ಕಡ್ಡಾಯ.
ಇತರ ಸೇವೆಗಳು: ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ಹೊಸ ಆವೃತ್ತಿ (New Edition) ಸೇರ್ಪಡೆ, ದಂಡ ಪಾವತಿ, ಆಮದು ಕಾಗದದ ಅನುಮತಿ ಮತ್ತು ರದ್ದತಿ ಪ್ರಕ್ರಿಯೆಗಳನ್ನು ಪೋರ್ಟಲ್ ಮೂಲಕವೇ ಮಾಡಬಹುದು.
ನಕಾರಾತ್ಮಕ ಸುದ್ದಿಗಿಂತ ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಆದ್ಯತೆ ನೀಡಿ: ಕಾರ್ಯದರ್ಶಿ ಜೆ. ಮಂಜುನಾಥ್
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಾರ್ತಾ ಇಲಾಖೆ ಕಾರ್ಯದರ್ಶಿ ಜೆ. ಮಂಜುನಾಥ್, “ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ. ನಕಾರಾತ್ಮಕ ವಿಷಯಗಳಿಗಿಂತ ಆಶಾದಾಯಕ ಹಾಗೂ ಅಭಿವೃದ್ಧಿ ಪರ ಸುದ್ದಿಗಳಿಗೆ ಪತ್ರಿಕೆಗಳು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು” ಎಂದು ಸಲಹೆ ನೀಡಿದರು. ಅಲ್ಲದೆ, ಕೃತಕ ಬುದ್ಧಿಮತ್ತೆ (AI) ಹಾಗೂ ಚಾಟ್ ಜಿಪಿಟಿ ತಂತ್ರಜ್ಞಾನ ಬೆಳೆದಿರುವ ಈ ಯುಗದಲ್ಲಿ ಪತ್ರಿಕೆಗಳ ಹಾಜರಾತಿ ಹಾಗೂ ಪ್ರಸಾರ ಸಂಖ್ಯೆಯ ಮೇಲೆ ಹೆಚ್ಚಿನ ನಿಗಾ ವಹಿಸುವ ಅಗತ್ಯವಿದೆ ಎಂದರು.
ಪ್ರೋತ್ಸಾಹ ಜಾಹೀರಾತು ದುರುಪಯೋಗಕ್ಕೆ ತಡೆ: ಆಯುಕ್ತ ಎಂ.ಎನ್. ಅನುಚೇತ್
ವಾರ್ತಾ ಇಲಾಖೆ ಆಯುಕ್ತ ಎಂ.ಎನ್. ಅನುಚೇತ್ ಮಾತನಾಡಿ, ದಿನಪತ್ರಿಕೆಗಳ ಬೆಂಬಲಕ್ಕಾಗಿ ಸರ್ಕಾರ ನೀಡುವ ಪ್ರೋತ್ಸಾಹ ಜಾಹೀರಾತು ವೆಚ್ಚವು 2022 ರಲ್ಲಿ ₹44 ಕೋಟಿಯಿಂದ ಪ್ರಸ್ತುತ ₹82 ಕೋಟಿಗೆ ದ್ವಿಗುಣಗೊಂಡಿದೆ. ಪ್ರೋತ್ಸಾಹ ಜಾಹೀರಾತು ಪಡೆಯುವುದಕ್ಕಾಗಿಯೇ ಹೊಸ ಪತ್ರಿಕೆಗಳು ಹುಟ್ಟಿಕೊಳ್ಳುತ್ತಿರುವುದು ಆತಂಕಕಾರಿ. ನಿಜವಾದ ಪತ್ರಕರ್ತರಿಗೆ ಈ ಪ್ರೋತ್ಸಾಹ ತಲುಪಬೇಕು. ಹಾಗಾಗಿ ‘ಡಿಜಿಟಲ್ ಯುಗದಲ್ಲಿ ನಿಜವಾದ ಪತ್ರಕರ್ತ ಯಾರು?’ ಎಂಬುದರ ಬಗ್ಗೆ ರಾಷ್ಟ್ರಮಟ್ಟದಲ್ಲಿ ಸ್ಪಷ್ಟ ವ್ಯಾಖ್ಯಾನ ಮತ್ತು ಗಂಭೀರ ಚರ್ಚೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಈ ಕಾರ್ಯಾಗಾರದಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದ ಮುಖ್ಯಸ್ಥ ಬಿ.ಕೆ. ಕೇಶವಮೂರ್ತಿ, ಎನ್.ಐ.ಸಿ ಉಪನಿರ್ದೇಶಕ ಗೌರವ್ ಶರ್ಮಾ, ಇಲಾಖೆಯ ಜಂಟಿ ನಿರ್ದೇಶಕರು, ಜಿಲ್ಲಾ ವಾರ್ತಾಧಿಕಾರಿಗಳು ಹಾಗೂ ರಾಜ್ಯದ ನಾನಾ ಜಿಲ್ಲೆಗಳ ದಿನಪತ್ರಿಕೆಗಳ ಮಾಲೀಕರು, ಸಂಪಾದಕರು ಮತ್ತು ಮುದ್ರಕರು ಉಪಸ್ಥಿತರಿದ್ದರು.