ಚೆನ್ನೈನ ಪ್ರಮುಖ ಪ್ರದೇಶವಾದ ಹಳೆಯ ಮಹಾಬಲಿಪುರಂ ರಸ್ತೆಯ (OMR) ಟೈಡಲ್ ಪಾರ್ಕ್ (Tidel Park) ಸಮೀಪದ ತಿರುವನ್ಮಿಯೂರ್ ಎಂಆರ್‌ಟಿಎಸ್ ನಿಲ್ದಾಣದ ಬಳಿ ಈ ದುರ್ಘಟನೆ ಜರುಗಿದೆ. ಗುರುವಾರ ಬೆಳಗ್ಗೆ OMR ರಸ್ತೆಯಲ್ಲಿ ಬಿಳಿ ಬಣ್ಣದ ಕಾರೊಂದು ಸಾಗುತ್ತಿದ್ದ ವೇಳೆ, ರಸ್ತೆಯ ಮಧ್ಯಭಾಗದ ಒಂದು ಭಾಗ ಏಕಾಏಕಿ ಕುಸಿದು ಬೃಹತ್ ಗುಂಡಿ ಸೃಷ್ಟಿಯಾಗಿದೆ. ಪರಿಣಾಮ ಕಾರಿನ ಚಕ್ರ ಗುಂಡಿಯಲ್ಲಿ ಸಿಲುಕಿಕೊಂಡಿದೆ. ಇದೇ ವೇಳೆ ಕಾರಿನ ಪಕ್ಕದಲ್ಲಿದ್ದ ಎಂಟಿಸಿ (MTC) ಬಸ್ ಹಾಗೂ ಮೆಟ್ರೋ ಬ್ಯಾರಿಕೇಡ್ ನಡುವೆ ಸಾಗಲು ಯತ್ನಿಸಿದ ರಭಸಕ್ಕೆ ಕಾರು ಸಂಪೂರ್ಣವಾಗಿ ತಲೆಕೆಳಗಾಗಿ ಬಿದ್ದಿದೆ. ಈ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸಂಚಾರ ಅಸ್ತವ್ಯಸ್ತ ಹಾಗೂ ತೆರವು ಕಾರ್ಯಾಚರಣೆ:
ಅನಿರೀಕ್ಷಿತ ರಸ್ತೆ ಕುಸಿತದಿಂದಾಗಿ OMR ರಸ್ತೆಯ ಈ ಪ್ರಮುಖ ಮಾರ್ಗದಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಕ್ರೇನ್ ಸಹಾಯದಿಂದ ಗುಂಡಿಯಲ್ಲಿದ್ದ ಕಾರನ್ನು ಮೇಲಕ್ಕೆತ್ತಿ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ಅಲ್ಲದೆ, ರಸ್ತೆಯಲ್ಲಿ ಉಂಟಾಗಿರುವ ಬೃಹತ್ ಗುಂಡಿಯನ್ನು ಮುಚ್ಚುವ ತುರ್ತು ಕಾಮಗಾರಿಯನ್ನು ಕೈಗೊಳ್ಳಲಾಗಿದೆ.
ಮೆಟ್ರೋ ಕಾಮಗಾರಿಯೇ ಕಾರಣವೇ?:
ಘಟನೆ ನಡೆದ ಸ್ಥಳದ ಅತಿ ಸಮೀಪದಲ್ಲೇ ಭೂಗತ ಮೆಟ್ರೋ ಕಾಮಗಾರಿ ನಡೆಯುತ್ತಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಮೆಟ್ರೋ ಸುರಂಗ ಕಾಮಗಾರಿಯ ವೈಪಲ್ಯವೇ ರಸ್ತೆ ಕುಸಿತಕ್ಕೆ ಕಾರಣವೇ ಎಂಬ ಬಗ್ಗೆ ಸಾರ್ವಜನಿಕವಾಗಿ ಅನುಮಾನ ವ್ಯಕ್ತವಾಗುತ್ತಿದ್ದು, ಈ ಕುರಿತು ಚೆನ್ನೈ ಮೆಟ್ರೋ ರೈಲ್ ಲಿಮಿಟೆಡ್ (CMRL) ಅಧಿಕಾರಿಗಳಿಂದ ಅಧಿಕೃತ ಸ್ಪಷ್ಟನೆ ದೊರೆಯಬೇಕಿದೆ.