ತೂತ್ತುಕುಡಿ: ಇಲ್ಲಿನ ಶಂಕರಪೇರಿ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ನಿವೃತ್ತ ಸಬ್ ಇನ್ಸ್ಪೆಕ್ಟರ್ ಅವರ ಪುತ್ರಿಯನ್ನು ಪ್ರಿಯಕರನ ಪತ್ನಿಯೇ ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಜಮೀನಿನಲ್ಲಿ ಹೂತುಹಾಕಿರುವ ಅತ್ಯಂತ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಿವೃತ್ತ ಎಸ್ಐ ಸೆಲ್ಲದುರೈ ಅವರ ಪುತ್ರಿ ಬೃಂದಾದೇವಿ (34) ಕೊಲೆಯಾದ ದುರ್ದೈವಿ. ಈಕೆಗೆ ಇಬ್ಬರು ಮಕ್ಕಳಿದ್ದು, ಪತಿ ಕೃಷ್ಣಕುಮಾರ್ ಕುವೈತ್ನಲ್ಲಿ ಉದ್ಯೋಗದಲ್ಲಿದ್ದಾರೆ. ನೆರೆಮನೆಯ ವೆಲ್ಡಿಂಗ್ ಕಾಂಟ್ರಾಕ್ಟರ್ ಮರಿಮುತ್ತು (42) ಎಂಬಾತನೊಂದಿಗೆ ಬೃಂದಾದೇವಿಗೆ ಇದ್ದ ಅನೈತಿಕ ಸಂಬಂಧವೇ ಈ ಭೀಕರ ಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ.
ಬೃಂದಾದೇವಿ ದಿಢೀರನೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹತ್ವದ ಸುಳಿವು ಲಭ್ಯವಾಗಿತ್ತು. ಮುಂಜಾನೆ 5:20ರ ಸುಮಾರಿಗೆ ಮರಿಮುತ್ತು ತನ್ನ ಮನೆಯ ಬಾಗಿಲು ತೆರೆದಿಟ್ಟಿರುವುದು ಮತ್ತು ಬೃಂದಾದೇವಿ ಆತನ ಮನೆಗೆ ಪ್ರವೇಶಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯದ ಆಧಾರದ ಮೇಲೆ ಪೊಲೀಸರು ಮರಿಮುತ್ತು ಹಾಗೂ ಆತನ ಪತ್ನಿ ಶರವಣಪ್ರಿಯಾರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೊಲೆಯ ಭೀಕರ ಸತ್ಯಾಂಶ ಹೊರಬಿದ್ದಿದೆ.
ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿರುವ ಮಾಹಿತಿ ಪ್ರಕಾರ, ಪತ್ನಿ ಮತ್ತು ಮಕ್ಕಳು ಪಕ್ಕದ ಕೋಣೆಯಲ್ಲಿ ಮಲಗಿದ್ದಾಗ ಮರಿಮುತ್ತು ಬೃಂದಾದೇವಿಯನ್ನು ತನ್ನ ಕೋಣೆಗೆ ಕರೆಸಿಕೊಂಡಿದ್ದನು. ಇಬ್ಬರೂ ಏಕಾಂತದಲ್ಲಿದ್ದಾಗ ಮರಿಮುತ್ತು ಪತ್ನಿ ಶರವಣಪ್ರಿಯಾ ಅನಿರೀಕ್ಷಿತವಾಗಿ ಕೋಣೆಗೆ ಬಂದಿದ್ದಾರೆ. ಇಬ್ಬರನ್ನೂ ಒಟ್ಟಿಗೆ ನೋಡಿ ತೀವ್ರ ಆಕ್ರೋಶಗೊಂಡ ಶರವಣಪ್ರಿಯಾ ಮನೆಯಲ್ಲಿ ಜೋರಾಗಿ ಗಲಾಟೆ ಮಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದಾಗ, ಕೋಪೋದ್ರಿಕ್ತಳಾದ ಶರವಣಪ್ರಿಯಾ ಪತಿಯ ಕಣ್ಣೆದುರೇ ಬೃಂದಾದೇವಿಯ ಮುಖಕ್ಕೆ ದಿಂಬಿನಿಂದ ಬಲವಾಗಿ ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಹತ್ಯೆಯ ನಂತರ ಸಾಕ್ಷ್ಯ ನಾಶಪಡಿಸಲು ಸಂಚು ರೂಪಿಸಿದ ಮರಿಮುತ್ತು, ತನ್ನ ಭಾವ ಕಾರ್ತಿಕ್ನನ್ನು ಮನೆಗೆ ಕರೆಸಿಕೊಂಡಿದ್ದಾನೆ. ಮೂವರೂ ಸೇರಿ ಬೃಂದಾದೇವಿ ಶವವನ್ನು ಗೋಣಿ ಚೀಲದಲ್ಲಿ ತುಂಬಿಸಿ, ಕಾರಿನ ಡಿಕ್ಕಿಯಲ್ಲಿ ಇಟ್ಟುಕೊಂಡು ಒಟ್ಟಪಿಡಾರಂ ಎಂಬಲ್ಲಿರುವ ತಮ್ಮ ಜಮೀನಿಗೆ ಕೊಂಡೊಯ್ದಿದ್ದಾರೆ. ಅಲ್ಲಿ ರಹಸ್ಯವಾಗಿ ಗುಂಡಿ ತೋಡಿ ಶವವನ್ನು ಹೂತುಹಾಕಿ ಯಾರಿಗೂ ತಿಳಿಯದಂತೆ ನಾಟಕವಾಡಿದ್ದರು.
ಪ್ರಸ್ತುತ ತೂತ್ತುಕುಡಿ ಪೊಲೀಸರು ಹಂತಕ ದಂಪತಿಯನ್ನು ಬಂಧಿಸಿದ್ದು, ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇತ್ತ ಸಾಕ್ಷ್ಯ ನಾಶಕ್ಕೆ ಸಹಕರಿಸಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಕಾರ್ತಿಕ್ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಕ್ಷಣಿಕ ಸುಖದ ಆಸೆ ಹಾಗೂ ಹಾದಿತಪ್ಪಿದ ಸಂಬಂಧಗಳು ಎರಡು ಸುಂದರ ಕುಟುಂಬಗಳನ್ನು ಹೇಗೆ ಬೀದಿಪಾಲು ಮಾಡುತ್ತವೆ ಎಂಬುದಕ್ಕೆ ಈ ದುರಂತ ಘಟನೆಯೇ ಸಾಕ್ಷಿಯಾಗಿದೆ.