Skip to main content

Police Roundup

ರೌಡಿಶೀಟರ್‌ಗಳು, ಮೀಟರ್ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಪೊಲೀಸರ ದಿಢೀರ್ ದಾಳಿ; 14 ಮಂದಿಗೆ ಶಾಕ್!

Share News

ಮುಂಡಗೋಡ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮೀಟರ್ ಬಡ್ಡಿ ದಂಧೆ ಹಾಗೂ ರೌಡಿ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಬುಧವಾರ ಮುಂಜಾನೆ ಮುಂಡಗೋಡ ಪಟ್ಟಣದಾದ್ಯಂತ ರೌಡಿಶೀಟರ್‌ಗಳು ಹಾಗೂ ಅಕ್ರಮ ಬಡ್ಡಿ ವ್ಯವಹಾರ ನಡೆಸುತ್ತಿರುವವರ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದಾರೆ.

 

​ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎಂ.ಎನ್. ಅವರ ಖಡಕ್ ನಿರ್ದೇಶನದಂತೆ ಹಾಗೂ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರ ನೇರ ನೇತೃತ್ವದಲ್ಲಿ ಈ ಮುಂಜಾನೆ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

 

ಮಾನ್ಯ ನ್ಯಾಯಾಲಯದಿಂದ ಮುಂಚಿತವಾಗಿಯೇ ಸರ್ಚ್ ವಾರೆಂಟ್ (ಆದೇಶ) ಪಡೆದುಕೊಂಡಿದ್ದ ಪೊಲೀಸ್ ತಂಡ, ಬುಧವಾರ ಮುಂಜಾನೆ 7 ಗಂಟೆಯಿಂದಲೇ ಕಾರ್ಯಾಚರಣೆಗೆ ಇಳಿಯಿತು. ಮುಂಡಗೋಡ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಮೇಶ ಹಾನಾಪುರ, ಸಬ್‌ ಇನ್ಸ್‌ಪೆಕ್ಟರ್ ಮಂಜುನಾಥ ಗೌಡ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಏಕಕಾಲಕ್ಕೆ ಒಟ್ಟು 14 ಮಂದಿ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ ಜಾಲಾಡಿದೆ.

 

ಪೊಲೀಸರು ದಾಳಿ ನಡೆಸಿ ಶೋಧ ನಡೆಸಿರುವ 14 ಮಂದಿಯ ವಿವರ ಇಲ್ಲಿದೆ:

ಕಿರಣ ಸೋಳಂಕಿ, ಮಂಜು ನವಲೆ, ಮಲ್ಲಿಕಜಾನ್ ಅಲಿಯಾಸ್ ಜಹೀರ್ ಶೇಖ್, ಮಹಮ್ಮದ್ ಸಾದೀಕ್ ಗಾಜೀಪೂರ, ವಾಸಿಂಖಾನ್ ಬೆಂಡಿಗೇರಿ, ಮಕ್ಖುಲ್ ಅಹಮದ್ ಯಳ್ಳೂರು, ಮದುಸಿಂಗ್ ರಜಪೂತ್, ಮಂಜುನಾಥ ಹೋಟಕರ್ ಅಲಿಯಾಸ್ ಶೇರಖಾನೆ, ಮಹಮ್ಮದ್ ಇಬ್ರಾಹಿಂ ಅಲಿಯಾಸ್ ರಫಿಕ್ ಜಮಖಂಡಿ, ಹರುಣ ಶೇಖ್, ಮಹಮ್ಮದ್ ಯೂಸುಫ್ ಗಡವಾಲೆ, ಮಹಮ್ಮದ್ ಇಸ್ಮಾಯಿಲ್ ಪಾನಾವಾಲೆ, ಸಂಜು ನವಲೆ ಮತ್ತು ತೌಸಿಫ್ ಅಹಮದ್ ಪಣಿಬಂದ.

 

ಇತ್ತೀಚೆಗಷ್ಟೇ ಮೀಟರ್ ಬಡ್ಡಿ ದಂಧೆಯ ಪ್ರಮುಖ ಆರೋಪಿಯಾದ ಜಮೀರ್ ಅಹ್ಮದ್ ಹತ್ಯೆಯಾದ ಬಳಿಕ ಮುಂಡಗೋಡಿನಲ್ಲಿ ಅಕ್ರಮ ಬಡ್ಡಿ ಜಾಲದ ವಿರುದ್ಧ ಪೊಲೀಸರು ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲವು ರೌಡಿಶೀಟರ್‌ಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಇದೀಗ ಎರಡನೇ ಬಾರಿಗೆ ವ್ಯಾಪಕ ಮಟ್ಟದಲ್ಲಿ ಮನೆ ಶೋಧನೆ ನಡೆಸುವ ಮೂಲಕ ಸಮಾಜಘಾತಕ ಶಕ್ತಿಗಳಿಗೆ ಖಾಕಿ ಪಡೆ ದಂಗಾಗುವಂತೆ ಮಾಡಿದೆ.

“ಸಾರ್ವಜನಿಕರಿಗೆ ಕಿರುಕುಳ ನೀಡುವ ಮೀಟರ್ ಬಡ್ಡಿ ದಂಧೆಕೋರರು, ರೌಡಿಗಳು ಹಾಗೂ ಕಾನೂನು ಕೈಗೆತ್ತಿಕೊಳ್ಳುವ ಯಾವುದೇ ವ್ಯಕ್ತಿಗಳ ವಿರುದ್ಧ ಮುಂದಿನ ದಿನಗಳಲ್ಲೂ ಇಂತಹ ಕಟ್ಟುನಿಟ್ಟಿನ ವಿಶೇಷ ಕಾರ್ಯಾಚರಣೆಗಳು ಮುಂದುವರಿಯಲಿವೆ” ಎಂದು ಇಲಾಖೆಯ ಉನ್ನತ ಅಧಿಕಾರಿಗಳು ಎಚ್ಚರಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin