ಹರಪನಹಳ್ಳಿ (ವಿಜಯನಗರ): ಸಾರ್ವಜನಿಕರ ನಿದ್ದೆಗೆಡಿಸಿದ್ದ ಅಂತರಜಿಲ್ಲಾ ಬೈಕ್ ಕಳ್ಳರ ಗ್ಯಾಂಗ್ ಅನ್ನು ಅರಸೀಕೆರೆ ಪೊಲೀಸರು ಯಶಸ್ವಿಯಾಗಿ ಬೇಟೆಯಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಅಂದಾಜು 6 ಲಕ್ಷ 65 ಸಾವಿರ ರೂಪಾಯಿ ಮೌಲ್ಯದ 16 ಬೈಕ್ಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಗಳು:
ಬಂಧಿತರನ್ನು ಅಪ್ತಾಫ್ (23), ಜಾಬೀರ್ (29) ಮತ್ತು ಶಾಹೀದ್ ಅಹಮ್ಮದ್ (20) ಎಂದು ಗುರುತಿಸಲಾಗಿದೆ. ಈ ಕಿಲಾಡಿ ಕಳ್ಳರು ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸರಣಿ ಬೈಕ್ ಕಳ್ಳತನ ನಡೆಸಿ ಪೊಲೀಸರಿಗೆ ತಲೆನೋವಾಗಿದ್ದರು.
ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ವಿಶೇಷ ತಂಡ ರಚಿಸಿದ್ದ ಅರಸೀಕೆರೆ ಪೊಲೀಸರು, ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ವೇಳೆ ಆರೋಪಿಗಳು ತಾವು ಕಳ್ಳತನ ಮಾಡಿದ್ದ 16 ದ್ವಿಚಕ್ರ ವಾಹನಗಳ ಬಗ್ಗೆ ಬಾಯ್ಬಿಟ್ಟಿದ್ದು, ಪೊಲೀಸರು ಆ ಎಲ್ಲಾ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಸದ್ಯ ಆರೋಪಿಗಳ ವಿರುದ್ಧ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ವಾಹನಗಳನ್ನು ಪತ್ತೆ ಹಚ್ಚಿದ ಪೊಲೀಸ್ ತಂಡದ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.