ಇಂಡಿ (ಸೆ.25): ಅಕ್ರಮ ಚಟುವಟಿಕೆಗಳ ವಿರುದ್ಧ ಸಮರ ಸಾರಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಓರ್ವ ವ್ಯಕ್ತಿಯನ್ನು ಬಂಧಿಸಿ ಆತನಿಂದ ದ್ವಿಚಕ್ರ ವಾಹನ ಸೇರಿದಂತೆ ₹50,080 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 25ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಇಂಡಿ ತಾಲೂಕಿನ ತಾಂಬಾ-ಬಂಥನಾಳ ರಸ್ತೆಯಲ್ಲಿ ಅಬಕಾರಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ ನೋಂದಣಿ ಸಂಖ್ಯೆಯಿಲ್ಲದ ಬಿಳಿ ಮತ್ತು ಕಪ್ಪು ಬಣ್ಣದ ಬಜಾಜ್ ಕಂಪನಿಯ ಬಾಕ್ಸರ್ ದ್ವಿಚಕ್ರ ವಾಹನ ಹಾಗೂ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿ ತಾಲೂಕಿನ ಮಸಳಿ ಬಿಕೆ ಗ್ರಾಮದ ಅಬ್ದುಲ್ ಸತ್ತಾರ್ ಮಹಮ್ಮದಲಿ ಗೌರ (25) ಎಂಬಾತನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ದೂರು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇಂಡಿ ವಲಯದ ಅಬಕಾರಿ ಉಪ ನಿರೀಕ್ಷಕ ಎಸ್.ಜಿ. ಅಂಗಡಿ ಪ್ರಕರಣ ದಾಖಲಿಸಿಕೊಂಡಿದ್ದು, ದಾಳಿಯಲ್ಲಿ ಸಿಬ್ಬಂದಿಗಳಾದ ಸವಿತಾ ಮುಧೋಳ, ಸಂಜೀವಕುಮಾರ ಹೂವಿನವರ, ಸುಭಾಸ ಅಥರ್ಗಾ, ಮಂಜುನಾಥ ಬಡಿಗೇರ ಹಾಗೂ ಶಿವಶಂಕರ ಗೋಟ್ಯಾಳ ಭಾಗವಹಿಸಿದ್ದರು. ಈ ಕುರಿತು ಇಂಡಿ ವಲಯದ ಅಬಕಾರಿ ನಿರೀಕ್ಷಕ ರಾಹುಲ್ ನಾಯಕ ಅವರು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.