ಹೈದರಾಬಾದ್: ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ಪ್ರಸಿದ್ಧ ಶಾಮೀರ್ಪೇಟೆ ಕೆರೆ ಪ್ರದೇಶದಲ್ಲಿ ಭಕ್ತರ ಸುರಕ್ಷತೆ ಹಾಗೂ ಸುಗಮ ವಿಸರ್ಜನೆಗಾಗಿ ಪೊಲೀಸ್ ಇಲಾಖೆ ವತಿಯಿಂದ ವ್ಯಾಪಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಮಲ್ಕಾಜ್ಗಿರಿ ಪೊಲೀಸ್ ಆಯುಕ್ತೆ ಬಿ. ಸುಮತಿ (IPS) ಅವರು, ಮಲ್ಕಾಜ್ಗಿರಿ ಮುನ್ಸಿಪಲ್ ಕಮಿಷನರ್ ಅವರೊಂದಿಗೆ ಕೆರೆ ಪ್ರದೇಶಕ್ಕೆ ಜಂಟಿಯಾಗಿ ಭೇಟಿ ನೀಡಿ ಭದ್ರತೆ ಹಾಗೂ ಮೂಲಸೌಕರ್ಯ ವ್ಯವಸ್ಥೆಗಳನ್ನು ಸಮಗ್ರವಾಗಿ ಪರಿಶೀಲಿಸಿದರು.
ವಿಸರ್ಜನಾ ಸ್ಥಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ ಕಟ್ಟುನಿಟ್ಟಿನ ಬಂದೋಬಸ್ತ್, ಸಿಸಿಟಿವಿ ಕ್ಯಾಮೆರಾಗಳ ಕಣ್ಣಾವಲು, ಬೃಹತ್ ಕ್ರೇನ್ಗಳು, ಬ್ಯಾರಿಕೇಡ್ಗಳು, ತಾತ್ಕಾಲಿಕ ಬೆಳಕಿನ ವ್ಯವಸ್ಥೆ ಹಾಗೂ ಸಂಚಾರ ನಿಯಂತ್ರಣ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.
ವಿಸರ್ಜನೆ ಪ್ರಕ್ರಿಯೆ ಯಾವುದೇ ಅಡಚಣೆಯಿಲ್ಲದೆ ಶಾಂತಿಯುತವಾಗಿ ನೆರವೇರಲು ಪೊಲೀಸ್ ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಆಯುಕ್ತರು ನಿರ್ದೇಶಿಸಿದರು. ಭಕ್ತರು ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸಿ ಶಾಂತಿಯುತ ಹಾಗೂ ಸುರಕ್ಷಿತ ಹಬ್ಬ ಆಚರಣೆಗೆ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.