Skip to main content

Police Roundup

ಕಾಡು ಪ್ರಾಣಿಗಳ ಶಿಕಾರಿ ಜಾಲ ಪತ್ತೆ: 45 ಜೀವಂತ ಕಚ್ಚಾ ಬಾಂಬ್ ವಶ, ಓರ್ವ ಆರೋಪಿ ಸೆರೆ

Share News

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿಯ ಹರತಾಳು ಗ್ರಾಮದ ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ ಕಚ್ಚಾ ಬಾಂಬ್ ಬಳಸಿ ವನ್ಯಜೀವಿಗಳ ಶಿಕಾರಿ ನಡೆಸುತ್ತಿದ್ದ ಜಾಲವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಕಾರ್ಯಾಚರಣೆಯ ವೇಳೆ 45 ಜೀವಂತ ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

 

ಕೋಟೆತಾರಿಗಾದಿಂದ ಹರತಾಳು ಕಡೆಗೆ ಸಾಗುವ ಮುಖ್ಯ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಪ್ರಾಣಿಗಳ ಶಿಕಾರಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಹೊಸನಗರ ವಲಯದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಜಂಟಿ ದಾಳಿ ನಡೆಸಿದರು. ಈ ವೇಳೆ ಶಿಕಾರಿಯಲ್ಲಿ ತೊಡಗಿದ್ದ ಕೆ. ಹುಣಸವಳ್ಳಿ ಗ್ರಾಮದ ನಿವಾಸಿ ಎಂ. ಡಾಕಪ್ಪ (55) ಎಂಬಾತನನ್ನು ಬಂಧಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

 

ಅರಣ್ಯ ಇಲಾಖೆಯ ದಾಳಿಯ ಸುಳಿವು ಸಿಗುತ್ತಿದ್ದಂತೆ ಸ್ಥಳದಲ್ಲಿದ್ದ ಇತರ ಇಬ್ಬರು ಆರೋಪಿಗಳಾದ ಭಾಸ್ಕರ (55) ಹಾಗೂ ನಾಗರಾಜ ಗೌಡ (53) ಎಂಬುವವರು ಪರಾರಿಯಾಗಿದ್ದಾರೆ. ತಪ್ಪಿಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಅರಣ್ಯ ಇಲಾಖೆ ತೀವ್ರ ಶೋಧ ನಡೆಸುತ್ತಿದೆ.

 

ದಾಳಿಯ ಸಂದರ್ಭದಲ್ಲಿ ಆರೋಪಿಗಳಿಂದ 45 ಜೀವಂತ ಕಚ್ಚಾ ಬಾಂಬ್‌ಗಳನ್ನು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಒಂದು ದ್ವಿಚಕ್ರ ವಾಹನವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕಾಡು ಪ್ರಾಣಿಗಳನ್ನು ಕೊಲ್ಲಲು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿರುವುದು ಅರಣ್ಯ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.

 

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಹೊಸನಗರ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಎಸ್., ಉಪ ವಲಯ ಅರಣ್ಯಾಧಿಕಾರಿ ಅನಿಲ್ ಬೆಳ್ಳೆನವರ್, ಗಸ್ತು ಅರಣ್ಯ ಪಾಲಕರಾದ ಭರತ್ ಕುಮಾರ್, ಮಂಜುನಾಥ ಡಿ., ಪ್ರಶಾಂತ ಜಿ., ಪುಟ್ಟಸ್ವಾಮಿ ಕೆ.ವಿ. ಹಾಗೂ ಅರಣ್ಯ ಇಲಾಖೆಯ ಇತರ ಸಿಬ್ಬಂದಿಗಳು ಭಾಗವಹಿಸಿದ್ದರು.

​ವನ್ಯಜೀವಿಗಳ ಸಂರಕ್ಷಣೆಗಾಗಿ ಇಲಾಖೆಯು ಈ ಭಾಗದಲ್ಲಿ ಗಸ್ತನ್ನು ಮತ್ತಷ್ಟು ಚುರುಕುಗೊಳಿಸಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin