Skip to main content

Police Roundup

ತಾಯಿಯ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದ ಕುಟುಂಬ: ಕುಸುಮಾ ಅವರ ಅಂಗಾಂಗ ದಾನದಿಂದ 7-8 ಜೀವಗಳಿಗೆ ಮರುಜೀವ!

Share News

ಆನೇಕಲ್: ತಾಯಿಯನ್ನು ಕಳೆದುಕೊಂಡ ತೀವ್ರ ದುಃಖದ ನಡುವೆಯೂ ಪತಿ ಹಾಗೂ ಮಕ್ಕಳು ಕೈಗೊಂಡ ಒಂದು ಉದಾತ್ತ ನಿರ್ಧಾರ, ಸಾವಿನ ದವಡೆಯಲ್ಲಿದ್ದ ಹಲವು ವ್ಯಕ್ತಿಗಳ ಬಾಳಿಗೆ ಹೊಸ ಆಶಾಕಿರಣವಾಗಿದೆ. ಮೆದುಳು ನಿಷ್ಕ್ರಿಯಗೊಂಡ (ಬ್ರೈನ್ ಡೆಡ್) 39 ವರ್ಷದ ಮಹಿಳೆಯ ಅಂಗಾಂಗ ದಾನದ ಮೂಲಕ 7ರಿಂದ 8 ಜನರ ಜೀವ ಉಳಿಸಲು ಕುಟುಂಬ ಮುಂದಾಗಿದೆ.

 

​ಜಿಗಣಿ ಸಮೀಪದ ಹಾರಗದ್ದೆಯ ದ್ಯಾವಸಂದ್ರ ಗ್ರಾಮದ ನಿವಾಸಿ ಕುಸುಮಾ (39) ಅಂಗಾಂಗ ದಾನ ಮಾಡಿ ಅಮರರಾದ ಮಹಿಳೆ. ಇವರ ಪತಿ ಜಯಶಂಕರ್ ಖಾಸಗಿ ಕಂಪನಿ ನಡೆಸುತ್ತಿದ್ದು, ದಂಪತಿಗೆ ಓರ್ವ ಹೆಣ್ಣು ಹಾಗೂ ಓರ್ವ ಗಂಡು ಮಗುವಿದ್ದಾರೆ.

 

​ಘಟನೆಯ ವಿವರ:

ಕುಸುಮಾ ಅವರು ಮನೆಯಲ್ಲಿ ಕುಟುಂಬಸ್ಥರೊಂದಿಗೆ ಇದ್ದಾಗ ಏಕಾಏಕಿ ಹೃದಯಾಘಾತ ಸಂಭವಿಸಿ ಕುಸಿದುಬಿದ್ದಿದ್ದರು. ತಕ್ಷಣವೇ ಅವರನ್ನು ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ವೈದ್ಯರ ಸತತ ಪ್ರಯತ್ನದ ಹೊರತಾಗಿಯೂ ಕುಸುಮಾ ಅವರ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿರುವುದಾಗಿ (ಬ್ರೈನ್ ಡೆಡ್) ವೈದ್ಯರು ಸ್ಪಷ್ಟಪಡಿಸಿದ್ದರು.

 

​ನೋವಿನಲ್ಲೂ ನಿಸ್ವಾರ್ಥ ನಿರ್ಧಾರ:

ಪತ್ನಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸತ್ಯ ತಿಳಿದು ಕುಟುಂಬಸ್ಥರು ಕಂಗಾಲಾಗಿದ್ದರು. ಆದರೆ, ಈ ಆಘಾತಕಾರಿ ಸ್ಥಿತಿಯಲ್ಲೂ ಪತಿ ಜಯಶಂಕರ್ ಹಾಗೂ ಪುಟ್ಟ ಮಕ್ಕಳು, ತಮ್ಮ ತಾಯಿಯ ಅಂಗಾಂಗಗಳನ್ನು ದಾನ ಮಾಡಲು ಒಮ್ಮತದ ಮಹತ್ವದ ನಿರ್ಧಾರ ತಳೆದರು. ತಮ್ಮ ಪ್ರೀತಿಯ ತಾಯಿ ಇನ್ನಿಲ್ಲವಾದರೂ, ಅವರ ಅಂಗಾಂಗಗಳ ಮೂಲಕ ಮತ್ತಷ್ಟು ಜನರ ಬದುಕಿನಲ್ಲಿ ಬೆಳಕಾಗಲಿ ಎಂಬ ಸದುದ್ದೇಶ ಅವರದ್ದಾಗಿತ್ತು.

 

​7ರಿಂದ 8 ಜೀವಗಳಿಗೆ ಮರುಜೀವ:

ಕುಸುಮಾ ಅವರಿಂದ ಕಣ್ಣುಗಳು, ಹೃದಯ, ಶ್ವಾಸಕೋಶ, ಲಿವರ್ ಹಾಗೂ ಕಿಡ್ನಿಗಳನ್ನು ಪಡೆದುಕೊಳ್ಳಲಾಗಿದ್ದು, ಅಗತ್ಯವಿರುವ ರೋಗಿಗಳಿಗೆ ಕಸಿ ಮಾಡಲಾಗುತ್ತಿದೆ. ತಾಯಿಯನ್ನು ಕಳೆದುಕೊಂಡ ಕಠಿಣ ಕ್ಷಣದಲ್ಲೂ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಈ ಕುಟುಂಬದ ನಿರ್ಧಾರ ಇಡೀ ಸಮಾಜಕ್ಕೇ ಪ್ರೇರಣಾದಾಯಕವಾಗಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin