Skip to main content

Police Roundup

ಬೆಚ್ಚಿಬೀಳಿಸುವ ವಿಡಿಯೋ: ತರಗತಿಯಲ್ಲೇ ಪುಟ್ಟ ಮಕ್ಕಳ ಮೇಲೆ ಶಿಕ್ಷಕನ ಅಟ್ಟಹಾಸ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕ್ರೌರ್ಯ!

Share News

ಚರೈಡಿಯೋ (ಅಸ್ಸಾಂ): ಅಕ್ಷರ ಕಲಿಸಿ ಸಂಸ್ಕಾರ ನೀಡಬೇಕಾದ ಶಿಕ್ಷಕನೇ ಮಕ್ಕಳ ಮೇಲೆ ದೈತ್ಯನಂತೆ ವರ್ತಿಸಿರುವ ಅಮಾನವೀಯ ಘಟನೆಯೊಂದು ಅಸ್ಸಾಂನ ಚರೈಡಿಯೋ ಜಿಲ್ಲೆಯ ಮಥುರಾಪುರ ಬಗಿಚಾ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ತರಗತಿ ಕೋಣೆಯೊಳಗೆ ಶಿಕ್ಷಕನು ಸಣ್ಣ ಮಕ್ಕಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಬಯಲಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 

ಶಾಲೆಯ ಶಿಕ್ಷಕ ಮೊಹಮ್ಮದ್ ಆರಿಫುಲ್ ಇಸ್ಲಾಂ (51) ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಈ ಶಿಕ್ಷಕ ವಿದ್ಯಾರ್ಥಿಗಳಿಗೆ ಮನಬಂದಂತೆ ಥಳಿಸುವುದು ಮಾತ್ರವಲ್ಲದೆ, ಒಂದು ಮಗುವನ್ನು ಕಿಟಕಿಯಿಂದ ಹೊರಕ್ಕೆ ತಳ್ಳಲು ಪ್ರಯತ್ನಿಸಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಈತ ತರಗತಿಯ ಅವಧಿಯಲ್ಲಿ ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

 

ಶಿಕ್ಷಕನ ಅಸಲಿ ಮುಖವಾಡ ಬಯಲಾಗುತ್ತಿದ್ದಂತೆ ಪೋಷಕರು ಮತ್ತು ಸ್ಥಳೀಯ ಸಂಘಟನೆಗಳು ಶಾಲೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿವೆ. ‘ಅಸ್ಸಾಂ ಟೀ ಟ್ರೈಬ್ಸ್ ಸ್ಟೂಡೆಂಟ್ಸ್ ಅಸೋಸಿಯೇಷನ್’ ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.

 

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ. ಶಾಲಾ ಆಡಳಿತ ಮಂಡಳಿಯ ದೂರಿನ ಮೇರೆಗೆ ಶಿಕ್ಷಣ ಇಲಾಖೆಯು ಇಲಾಖಾ ತನಿಖೆಗೆ ಆದೇಶಿಸಿದೆ. ಸದ್ಯ ಆರೋಪಿಯ ವಿರುದ್ಧ ಮಕ್ಕಳ ರಕ್ಷಣೆ ಮತ್ತು ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ವಿಚಾರಣೆ ಮುಂದುವರಿದಿದೆ.

​ಈ ಘಟನೆಯು ಶೈಕ್ಷಣಿಕ ವಲಯದಲ್ಲಿ ಸಂಚಲನ ಮೂಡಿಸಿದ್ದು, ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin