ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪೊಲೀಸ್ ವ್ಯವಸ್ಥೆ ಈಗ ಮತ್ತೊಂದು ಅತ್ಯಾಧುನಿಕ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ. ಭಾಷಾ ಸಂವಹನದ ಕೊರತೆಯಿಂದ ತುರ್ತು ಸಂದರ್ಭಗಳಲ್ಲಿ ನೆರವು ಪಡೆಯಲು ನಾಗರಿಕರಿಗೆ ಆಗುತ್ತಿದ್ದ ತೊಂದರೆಯನ್ನು ನೀಗಿಸಲು, ಬೆಂಗಳೂರು ನಗರ ಪೊಲೀಸರು ದೇಶದಲ್ಲೇ ಮೊದಲ ಬಾರಿಗೆ 112 ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್ (ERSS) ನಲ್ಲಿ ಬಹುಭಾಷಾ ಅನುವಾದ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ನಡೆದ ವಿಶೇಷ ಸಮಾರಂಭದಲ್ಲಿ ಈ ನೂತನ ವ್ಯವಸ್ಥೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಯಾವುದೇ ನಾಗರಿಕರು ತುರ್ತು ಪರಿಸ್ಥಿತಿಯಲ್ಲಿ 112 ಸಂಖ್ಯೆಗೆ ಕರೆ ಮಾಡಿದಾಗ, ಅವರಿಗೆ ಕನ್ನಡ ಅಥವಾ ಸ್ಥಳೀಯ ಭಾಷೆ ತಿಳಿಯದಿದ್ದರೆ, ಈ ವ್ಯವಸ್ಥೆಯು ಕೃತಕ ಬುದ್ಧಿಮತ್ತೆಯನ್ನು (AI) ಬಳಸಿಕೊಂಡು ಕರೆ ಮಾಡುವವರ ಭಾಷೆಯನ್ನು ಗುರುತಿಸುತ್ತದೆ. ನಂತರ ಅವರ ಸಂಭಾಷಣೆಯನ್ನು ಸ್ವಯಂಚಾಲಿತವಾಗಿ ಪೊಲೀಸ್ ಸಿಬ್ಬಂದಿಗೆ ಅರ್ಥವಾಗುವ ಭಾಷೆಗೆ ಮತ್ತು ಪೊಲೀಸರ ಸೂಚನೆಗಳನ್ನು ಕರೆ ಮಾಡಿದವರಿಗೆ ಅವರದ್ದೇ ಭಾಷೆಗೆ ತರ್ಜುಮೆ ಮಾಡುತ್ತದೆ.
ಬೆಂಗಳೂರಿಗೆ ದೇಶ-ವಿದೇಶಗಳಿಂದ ಬರುವ ಜನರ ಅನುಕೂಲಕ್ಕಾಗಿ ಒಟ್ಟು 10 ಭಾಷೆಗಳನ್ನು ಈ ವ್ಯವಸ್ಥೆಯಲ್ಲಿ ಸಕ್ರಿಯಗೊಳಿಸಲಾಗಿದೆ:
ಭಾರತೀಯ ಭಾಷೆಗಳು: ಬೆಂಗಾಲಿ, ಗುಜರಾತಿ, ಓಡಿಯಾ, ಮಣಿಪುರಿ, ಕಾಶ್ಮೀರಿ, ನೇಪಾಳಿ ಮತ್ತು ಅಸ್ಸಾಮಿ.
ವಿದೇಶಿ ಭಾಷೆಗಳು: ಸ್ಪ್ಯಾನಿಷ್, ಫ್ರೆಂಚ್ ಮತ್ತು ಅರೇಬಿಕ್.
ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಗ್ರಹಿಸಲಾದ ದತ್ತಾಂಶದ ಆಧಾರದ ಮೇಲೆ, ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ವಿದೇಶಿಗರು ಮಾತನಾಡುವ ಈ ಮೂರು ಪ್ರಮುಖ ವಿದೇಶಿ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ. ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋಥ್, ವಂಶಿಕೃಷ್ಣ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾದ ಅಜಯ್ ಹಿಲೋರಿ ಹಾಗೂ ನಗರದ ಎಲ್ಲಾ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ದೇಶದ ಯಾವುದೇ ಮಹಾನಗರಗಳಲ್ಲಿ ಇಲ್ಲದ ಇಂತಹ ವಿನೂತನ ವ್ಯವಸ್ಥೆಯನ್ನು ಬೆಂಗಳೂರು ಪೊಲೀಸರು ಅಳವಡಿಸಿಕೊಳ್ಳುವ ಮೂಲಕ, ಸಾರ್ವಜನಿಕ ಸುರಕ್ಷತೆಯಲ್ಲಿ ತಂತ್ರಜ್ಞಾನದ ಬಳಕೆಗೆ ಹೊಸ ಭಾಷ್ಯ ಬರೆದಿದ್ದಾರೆ.