Skip to main content

Police Roundup

ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ನರಕಸದೃಶ ವಿಕೃತಿ: ಹೆಣ್ಣುಮಕ್ಕಳ ಶವಗಳ ಫೋಟೋ ಶೂಟ್ ಮಾಡ್ತಿದ್ದ ಸಿಬ್ಬಂದಿ ಪೊಲೀಸ್ ವಶಕ್ಕೆ!

Share News

ಬೀದರ್: ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಅತ್ಯಂತ ವಿಕೃತ ಘಟನೆಯೊಂದು ಜಿಲ್ಲೆಯ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಾದ ‘ಬ್ರಿಮ್ಸ್’ (BRIMS) ಶವಾಗಾರದಲ್ಲಿ ಬೆಳಕಿಗೆ ಬಂದಿದೆ. ಶವಾಗಾರಕ್ಕೆ ಬರುವ ಮೃತ ಮಹಿಳೆಯರ ವಸ್ತ್ರಾಪಹರಣ ಮಾಡಿ ವಿಕೃತವಾಗಿ ಫೋಟೋ ಶೂಟ್ ಮಾಡುತ್ತಿದ್ದ ಮುನೀರ್ ಅಹ್ಮದ್ ಎಂಬ ಸಿಬ್ಬಂದಿಯ ಹೀನ ಕೃತ್ಯ ಬಯಲಾಗಿದ್ದು, ಆರೋಪಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

 

ಆರೋಪಿ ಮುನೀರ್ ಅಹ್ಮದ್ ಆಸ್ಪತ್ರೆಯ ಶವಾಗಾರಕ್ಕೆ ಬರುತ್ತಿದ್ದ ಮಹಿಳೆಯರ ಮೃತದೇಹಗಳ ನಗ್ನ ಚಿತ್ರಗಳನ್ನು ತನ್ನ ಮೊಬೈಲ್‌ನಲ್ಲಿ ರಹಸ್ಯವಾಗಿ ಕ್ಲಿಕ್ಕಿಸಿ, ಸಂಗ್ರಹಿಸಿಟ್ಟುಕೊಳ್ಳುತ್ತಿದ್ದ ಎನ್ನಲಾಗಿದೆ. ಈತನ ಸಂಶಯಾಸ್ಪದ ಹಾಗೂ ವಿಕೃತ ವರ್ತನೆಯ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳಿಗೆ ಮಾಹಿತಿ ಸಿಗುತ್ತಿದ್ದಂತೆ ಮೊಬೈಲ್ ಪರಿಶೀಲಿಸಿದಾಗ ಇಡೀ ಆಸ್ಪತ್ರೆ ಮಂಡಳಿಯೇ ಬೆಚ್ಚಿಬೀಳುವಂತಹ ಸತ್ಯ ಹೊರಬಂದಿದೆ. ಮರಣದ ನಂತರವೂ ಮಹಿಳೆಯರ ಘನತೆ ಹಾಗೂ ಗೌಪ್ಯತೆಗೆ ಧಕ್ಕೆ ತಂದಿರುವ ಈ ಘಟನೆ ವೈದ್ಯಕೀಯ ವಲಯದಲ್ಲಿ ತೀವ್ರ ಆಘಾತ ಸೃಷ್ಟಿಸಿದೆ.

 

ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಬ್ರಿಮ್ಸ್ ಆಸ್ಪತ್ರೆಯ ಶವಾಗಾರ ಮುಖ್ಯಸ್ಥರಾದ ಡಾ. ಮೋಸಿನ್ ಉಲ್ ಹಕ್ ಅವರು ತಕ್ಷಣವೇ ಬೀದರ್‌ನ ನ್ಯೂ ಟೌನ್ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿ ಮುನೀರ್ ಅಹ್ಮದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯಡಿ ಕಲಂ 301 ಹಾಗೂ 62 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

 

ಬ್ರಿಮ್ಸ್ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆಸ್ಪತ್ರೆಯಲ್ಲಿ ಬದುಕಿದ್ದಾಗಲೂ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಈಗ ಸತ್ತ ಮೇಲೂ ಶವಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಅದರಲ್ಲೂ ಸ್ವತಃ ಮಹಿಳಾ ನಿರ್ದೇಶಕರೇ ಇರುವ ಆಸ್ಪತ್ರೆಯಲ್ಲೇ ಮೃತ ಮಹಿಳೆಯರ ಶವಗಳಿಗೆ ಇಂತಹ ದುರ್ಗತಿ ಒದಗಿರುವುದು ತೀವ್ರ ಖಂಡನೆಗೆ ಒಳಗಾಗಿದೆ. ವಿಕೃತಿ ಮೆರೆದ ಕಾಮುಕ ಆರೋಪಿಗೆ ಕಾನೂನಿನಡಿ ಕಠಿಣಾತಿಕಠಿಣ ಶಿಕ್ಷೆಯಾಗಬೇಕು ಎಂದು ಜಿಲ್ಲೆಯ ಜನತೆ ಮತ್ತು ಸಂಘಟನೆಗಳು ಒತ್ತಾಯಿಸಿವೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin