ಹಾರೋಹಳ್ಳಿ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಹೊರಗುತ್ತಿಗೆ ಸಿಬ್ಬಂದಿಯೊಬ್ಬ ಸಿಕ್ಕಿಬಿದ್ದು, ಸದ್ಯ ಪೊಲೀಸರ ಅತಿಥಿಯಾಗಿರುವ ಗಂಭೀರ ಘಟನೆ ಹಾರೋಹಳ್ಳಿ ತಾಲೂಕಿನ ತೋಕಸಂದ್ರದಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ತೋಕಸಂದ್ರ ಗ್ರಾಮದ ಸುನೀಲ್ (ಶ್ರೀಧರ್) ಎಂದು ಗುರುತಿಸಲಾಗಿದೆ. ಈತ ಕಳೆದ 5 ವರ್ಷಗಳಿಂದ ಇದೇ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತೋಕಸಂದ್ರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಈ ವೇಳೆ ಅಲ್ಲಿಯೇ ಇದ್ದ ಸಿಬ್ಬಂದಿ ಸುನೀಲ್, ಮಹಿಳೆಗೆ ಮೂತ್ರ ಪರೀಕ್ಷೆ ಮಾಡಿಸಬೇಕೆಂದು ತಿಳಿಸಿ, ಅದಕ್ಕಾಗಿ ಶೌಚಾಲಯಕ್ಕೆ ಕಳುಹಿಸಿದ್ದಾನೆ. ಶೌಚಾಲಯಕ್ಕೆ ತೆರಳಿದ ಮಹಿಳೆ ಅಲ್ಲಿ ನೀರು ಬರುತ್ತಿಲ್ಲ ಎಂದು ಸುನೀಲ್ ಗಮನಕ್ಕೆ ತಂದಿದ್ದಾರೆ. ಇದನ್ನು ಪರೀಕ್ಷಿಸುವ ನೆಪದಲ್ಲಿ ಶೌಚಾಲಯದೊಳಗೆ ಹೋದ ಸುನೀಲ್, ರಹಸ್ಯವಾಗಿ ಮೊಬೈಲ್ ಅಥವಾ ಕ್ಯಾಮೆರಾ ಇಟ್ಟು ಹೊರಬಂದು, ಈಗ ನೀರು ಬರುತ್ತಿದೆ ಎಂದು ಮಹಿಳೆಯನ್ನು ಪುನಃ ಒಳಗೆ ಕಳುಹಿಸಿದ್ದಾನೆ.
ಶೌಚಾಲಯದೊಳಗೆ ಹೋದ ಮಹಿಳೆಗೆ ಅಲ್ಲಿ ಕಪ್ಪು ಬಣ್ಣದ ಸಣ್ಣ ವಸ್ತುವೊಂದು ಇರುವುದು ಕಂಡುಬಂದು ತೀವ್ರ ಅನುಮಾನಗೊಂಡಿದ್ದಾರೆ. ತಕ್ಷಣವೇ ಹೊರಬಂದ ಮಹಿಳೆ, ಆಸ್ಪತ್ರೆಯ ಹೊರಗಿದ್ದ ತನ್ನ ಪತಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಶೌಚಾಲಯದತ್ತ ಧಾವಿಸಿದ ಮಹಿಳೆಯ ಪತಿ, ಅಲ್ಲಿದ್ದ ವಸ್ತುವನ್ನು ಕಂಡು ಪ್ರಶ್ನಿಸಿದ್ದಾರೆ.
ತನ್ನ ಕೃತ್ಯ ಬಯಲಾಗುತ್ತಿದ್ದಂತೆ ಗಾಬರಿಗೊಂಡ ಆರೋಪಿ ಸುನೀಲ್, ತಕ್ಷಣವೇ ಆ ಕ್ಯಾಮೆರಾವನ್ನು ಸ್ಥಳದಲ್ಲೇ ಒಡೆದು ಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಮಹಿಳೆಯ ಪತಿ ಹಾಗೂ ಸ್ಥಳೀಯ ಗ್ರಾಮಸ್ಥರು ಆರೋಪಿಗೆ ತೀವ್ರವಾಗಿ ಧರ್ಮದೇಟು ನೀಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹಾರೋಹಳ್ಳಿ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಗ್ರಾಮಸ್ಥರ ವಶದಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆಯ ನಂತರವಷ್ಟೇ ಈತ ಈ ಹಿಂದೆ ಎಷ್ಟು ಮಹಿಳೆಯರ ವಿಡಿಯೋ ಚಿತ್ರೀಕರಿಸಿದ್ದಾನೆ ಎಂಬ ಸಂಪೂರ್ಣ ಸತ್ಯಾಸತ್ಯತೆ ಹೊರಬರಬೇಕಿದೆ.