Skip to main content

Police Roundup

ಹೊಸಪೇಟೆ: ಜಿಲ್ಲಾಡಳಿತದ ಮಿಂಚಿನ ದಾಳಿ; ನಂದಿಬಂಡಿಯಲ್ಲಿ ಜೀತಪದ್ಧತಿ ಜಾಲ ಪತ್ತೆ, 37 ಕಾರ್ಮಿಕರ ರಕ್ಷಣೆ

Share News

ಹೊಸಪೇಟೆ: ಜಿಲ್ಲೆಯ ವಿಜಯನಗರ ತಾಲೂಕಿನ ನಂದಿಬಂಡಿ ಗ್ರಾಮದಲ್ಲಿ ಅಮಾನವೀಯವಾಗಿ ಜೀತಕ್ಕಿರಿಸಿಕೊಂಡಿದ್ದ ಒಡಿಶಾ ಮೂಲದ 37 ಕಾರ್ಮಿಕರನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆಯ ಮೂಲಕ ಯಶಸ್ವಿಯಾಗಿ ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟವರಲ್ಲಿ 10 ಮಕ್ಕಳು, 11 ಮಹಿಳೆಯರು ಹಾಗೂ 16 ಪುರುಷರು ಸೇರಿದ್ದಾರೆ.

 

ಬೆಳಗಾವಿ ಮೂಲದ ‘ಸ್ಪಂದನಾ’ ಎಂಬ ಸರ್ಕಾರೇತರ ಸಂಸ್ಥೆ (NGO) ನೀಡಿದ ಖಚಿತ ಮಾಹಿತಿಯ ಮೇರೆಗೆ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರ ಮಾರ್ಗದರ್ಶನದಲ್ಲಿ ಸಹಾಯಕ ಆಯುಕ್ತ ವಿವೇಕಾನಂದ ನೇತೃತ್ವದ ತಂಡ ಈ ದಾಳಿ ನಡೆಸಿದೆ. ಸುಮಾರು 6 ತಿಂಗಳ ಹಿಂದೆ ಒಡಿಶಾದ ಬಲಂಗೀರ್ ಮತ್ತು ನಬರಂಗ್‌ಪುರ ಜಿಲ್ಲೆಗಳಿಂದ ಈ ಕಾರ್ಮಿಕರನ್ನು ಕೆಲಸಕ್ಕೆಂದು ಕರೆತರಲಾಗಿತ್ತು.

 

ದಾಳಿಯ ವೇಳೆ ಕಂಡುಬಂದ ಕಾರ್ಮಿಕರ ಸ್ಥಿತಿಗತಿಗಳು ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿವೆ. ಇಡೀ ಕುಟುಂಬಕ್ಕೆ ವಾರಕ್ಕೆ ಕೇವಲ 500 ರೂಪಾಯಿ ಕೂಲಿ ನೀಡಲಾಗುತ್ತಿತ್ತು. “ನೀವು ಮುಂಗಡ ಹಣ (Advance) ಪಡೆದಿದ್ದೀರಿ” ಎಂಬ ನೆಪವೊಡ್ಡಿ, ಕಾರ್ಮಿಕರು ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಬೆಳೆಸದಂತೆ ಸೆಕ್ಯುರಿಟಿ ಗಾರ್ಡ್‌ಗಳ ಕಣ್ಗಾವಲಿನಲ್ಲಿ ಇರಿಸಲಾಗಿತ್ತು. ಅಷ್ಟೇ ಅಲ್ಲದೆ, ಅತ್ಯಂತ ಕಿರಿದಾದ 4 ಅಡಿ ಅಗಲದ ತಾತ್ಕಾಲಿಕ ಶೆಡ್‌ಗಳಲ್ಲಿ ಇವರನ್ನು ಅಮಾನವೀಯವಾಗಿ ಇರಿಸಲಾಗಿತ್ತು.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಾಲೀಕರು ಮತ್ತು ಜೀತಪದ್ಧತಿಗೆ ಸಹಕರಿಸಿದವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. “ಇದು ಅತ್ಯಂತ ಆಘಾತಕಾರಿ ಘಟನೆಯಾಗಿದ್ದು, ಜಿಲ್ಲೆಯಲ್ಲಿ ಇಂತಹ ಶೋಷಣೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಎಚ್ಚರಿಸಿದ್ದಾರೆ.

 

ರಕ್ಷಿಸಲ್ಪಟ್ಟ ಎಲ್ಲ ಕಾರ್ಮಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದ್ದು, ಹೊಸಪೇಟೆ ರೈಲ್ವೆ ನಿಲ್ದಾಣದ ಮೂಲಕ ಅವರನ್ನು ಸುರಕ್ಷಿತವಾಗಿ ಒಡಿಶಾದ ಅವರ ತವರೂರಿಗೆ ಕಳುಹಿಸಿಕೊಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin