ಬೆಂಗಳೂರು: ರಾಜ್ಯ ರಾಜಕಾರಣದ ಹಿರಿಯ ನಾಯಕ ಹಾಗೂ ರಾಜ್ಯ ಸರ್ಕಾರದ ಸಚಿವ ಡಿ. ಸುಧಾಕರ್ (63) ಅವರು ಇಂದು ಮುಂಜಾನೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಕಳೆದ ನಾಲ್ಕು ವಾರಗಳಿಂದ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಬೆಳಗಿನ ಜಾವ 3.15ಕ್ಕೆ ಕೊನೆಯುಸಿರೆಳೆದಿದ್ದಾರೆ.
ಕೆಲವು ದಿನಗಳ ಹಿಂದೆ ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಮಂಡಿ ಚಿಪ್ಪಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸುಧಾಕರ್ ಅವರಿಗೆ, ಆಪರೇಷನ್ ನಂತರ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತ್ತು. ಧೂಮಪಾನದ ಹಿನ್ನೆಲೆಯಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿ ಅವರ ಆರೋಗ್ಯ ಸ್ಥಿತಿ ಗಂಭೀರ ಹಂತಕ್ಕೆ ತಲುಪಿತ್ತು ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಆರೋಗ್ಯ ಕ್ಷೀಣಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ನಂತರ ಶ್ವಾಸಕೋಶ ಮತ್ತು ಹೃದಯದ ಕಾರ್ಯವೈಖರಿ ಕುಸಿದಿದ್ದರಿಂದ ಅತ್ಯಾಧುನಿಕ ECMO (ಎಕ್ಮೋ) ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಸುಮಾರು ನಾಲ್ಕು ವಾರಗಳ ಕಾಲ ಐಸಿಯುನಲ್ಲಿ ಸಾವಿನೊಂದಿಗೆ ಹೋರಾಟ ನಡೆಸಿದ್ದ ಸಚಿವರಿಗೆ ಶ್ವಾಸಕೋಶ ಕಸಿ (Lung Transplant) ಮಾಡುವ ಆಲೋಚನೆಯೂ ಇತ್ತಾದರೂ, ದೇಹವು ಚಿಕಿತ್ಸೆಗೆ ಸ್ಪಂದಿಸದ ಕಾರಣ ಇಂದು ನಿಧನರಾಗಿದ್ದಾರೆ ಎಂದು ಕಿಮ್ಸ್ ಮೆಡಿಕಲ್ ಡೈರೆಕ್ಟರ್ ಡಾ. ಚಿನ್ನದೊರೈ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಸಚಿವ ಸುಧಾಕರ್ ಅವರ ಹಠಾತ್ ನಿಧನಕ್ಕೆ ಮುಖ್ಯಮಂತ್ರಿಗಳು, ಸಚಿವರು ಹಾಗೂ ರಾಜಕೀಯ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಸರಳ ವ್ಯಕ್ತಿತ್ವದ ಹಾಗೂ ಅಭಿವೃದ್ಧಿ ಪರ ಚಿಂತನೆಯ ನಾಯಕನನ್ನು ಕಳೆದುಕೊಂಡು ರಾಜ್ಯ ರಾಜಕಾರಣಕ್ಕೆ ದೊಡ್ಡ ನಷ್ಟವಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.
ಮೃತರ ಅಗಲಿಕೆಗೆ ಅಭಿಮಾನಿಗಳು ಹಾಗೂ ಬೆಂಬಲಿಗರು ಶೋಕ ವ್ಯಕ್ತಪಡಿಸಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.