Skip to main content

Police Roundup

ಫೇಸ್‌ಬುಕ್ ಸ್ನೇಹಕ್ಕೆ ಮರುಳಾದ ಮೈಸೂರಿನ ಗೃಹಿಣಿ: 12.65 ಲಕ್ಷ ರೂ. ಹಣ ಪಂಗನಾಮ!

Share News

ಮೈಸೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಮೈಸೂರಿನ ಗೃಹಿಣಿಯೊಬ್ಬರಿಗೆ ಬರೋಬ್ಬರಿ 12.65 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮೈಸೂರಿನ ಸೆನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ನಗರದ ಶಕ್ತಿನಗರದ ನಿವಾಸಿ ಹಾಗೂ ಸರ್ಕಾರಿ ಉದ್ಯೋಗಿಯ ಪತ್ನಿಯಾದ ವೇದಾ (40) ಹಣ ಕಳೆದುಕೊಂಡ ದುರ್ದೈವಿ. 2025ರಲ್ಲಿ ಫೇಸ್‌ಬುಕ್ ಮೂಲಕ ಇವರಿಗೆ ಲಂಡನ್ ನಿವಾಸಿ ಎಂದು ಪರಿಚಯಿಸಿಕೊಂಡ ಡಾ. ಜೋಸೆಫ್ ಆಲಿ ಎಂಬಾತ ಗಾಳ ಹಾಕಿದ್ದಾನೆ. ಆರಂಭದಲ್ಲಿ ಸ್ನೇಹ ಬೆಳೆಸಿದ ವಂಚಕ, ನಂತರ ತನ್ನ 9 ವರ್ಷದ ಮಗನನ್ನೂ ವೇದಾ ಅವರಿಗೆ ಪರಿಚಯಿಸಿದ್ದಾನೆ. ಮಗುವಿನೊಂದಿಗೆ ಭಾವನಾತ್ಮಕ ಬಾಂಧವ್ಯ ಬೆಳೆಸಿಕೊಂಡ ಗೃಹಿಣಿಯ ವಿಶ್ವಾಸವನ್ನು ಈತ ಸಂಪೂರ್ಣವಾಗಿ ಗೆದ್ದಿದ್ದನು.

 

ವಿಮಾನ ಟಿಕೆಟ್ ನೆಪ: ತಾನು ಇಂಡೋನೇಷ್ಯಾಗೆ ಹೋಗುತ್ತಿದ್ದೇನೆ, ಆದರೆ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ ಎಂದು ನಂಬಿಸಿದ ವಂಚಕ, ಟಿಕೆಟ್ ಖರೀದಿಸಲು ಸಹಾಯ ಕೇಳಿದ್ದಾನೆ. ಇದನ್ನು ನಂಬಿದ ವೇದಾ ಹಂತ-ಹಂತವಾಗಿ 1.85 ಲಕ್ಷ ರೂಪಾಯಿಗಳನ್ನು ಆತನ ಖಾತೆಗೆ ವರ್ಗಾಯಿಸಿದ್ದಾರೆ.

​25 ಲಕ್ಷದ ಆಮಿಷ: ಕೆಲ ದಿನಗಳ ನಂತರ ತಾನು ಭಾರತಕ್ಕೆ ಬಂದಿರುವುದಾಗಿ ತಿಳಿಸಿದ ಆತ, ವೇದಾ ಅವರ ಖಾತೆಗೆ 25 ಲಕ್ಷ ರೂಪಾಯಿಗಳನ್ನು ವರ್ಗಾಯಿಸುವುದಾಗಿ ನಂಬಿಸಿದ್ದಾನೆ.

​ಕರೆನ್ಸಿ ಬದಲಾವಣೆ ಚಾರ್ಜ್: ವಿದೇಶಿ ಹಣವನ್ನು ಭಾರತೀಯ ರೂಪಾಯಿಗೆ ಬದಲಾಯಿಸಲು (Currency Conversion) ಶುಲ್ಕ ಪಾವತಿಸಬೇಕೆಂದು ಹೇಳಿ ಮತ್ತೆ 10.80 ಲಕ್ಷ ರೂಪಾಯಿಗಳನ್ನು ಪೀಕಿದ್ದಾನೆ.

 

ಒಟ್ಟು 12.65 ಲಕ್ಷ ರೂಪಾಯಿಗಳನ್ನು ಪೀಕಿದ ನಂತರವೂ ಆತ ಮತ್ತೆ 1.55 ಲಕ್ಷ ರೂಪಾಯಿ ವರ್ಗಾಯಿಸುವಂತೆ ಬೇಡಿಕೆ ಇಟ್ಟಿದ್ದಾನೆ. ಈ ಹಂತದಲ್ಲಿ ಅನುಮಾನಗೊಂಡ ವೇದಾ ಅವರು ವಿಚಾರಿಸಿದಾಗ ವಂಚಕ ತನ್ನೆಲ್ಲಾ ಸಂಪರ್ಕಗಳನ್ನು ಕಡಿತಗೊಳಿಸಿದ್ದಾನೆ. ತಾನು ಮೋಸ ಹೋಗಿರುವುದು ಖಚಿತವಾಗುತ್ತಿದ್ದಂತೆ ಗೃಹಿಣಿ ಸೆನ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

​ಪೊಲೀಸ್ ಎಚ್ಚರಿಕೆ: ಅಪರಿಚಿತ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿ ಹಣದ ಸಹಾಯ ಕೇಳಿದರೆ ಅಥವಾ ಉಡುಗೊರೆಗಳ ಆಮಿಷ ಒಡ್ಡಿದರೆ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin