ಮೈಸೂರು: ಇಲ್ಲಿನ ವಿಜಯನಗರ ಎರಡನೇ ಹಂತದ ಪಬ್ವೊಂದರಲ್ಲಿ ತಡರಾತ್ರಿ ನಡೆದ ಕ್ಷುಲ್ಲಕ ಗಲಾಟೆಯು ವಿಕೋಪಕ್ಕೆ ತಿರುಗಿ, ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಯುವಕನೊಬ್ಬ ದಾರುಣವಾಗಿ ಕೊಲೆಯಾಗಿರುವ ಘಟನೆ ನಡೆದಿದೆ.
ನಗರದ ಗೋಕುಲಂ ನಿವಾಸಿ ನಿಶಾಂತ್ (32) ಕೊಲೆಯಾದ ದುರ್ದೈವಿ. ಈ ಕೃತ್ಯದ ಹಿಂದೆ ‘ಟ್ಯಾಂಕ್ ರಾಕಿ’ ಎಂಬುವವನ ಸಹಚರರ ಕೈವಾಡವಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನಿಶಾಂತ್, ತನ್ನ ಸ್ನೇಹಿತರಾದ ಸಂದೀಪ್ ಮತ್ತು ದೀಕ್ಷಿತ್ ಅವರೊಂದಿಗೆ ವಿಜಯನಗರದ ‘ಪರ್ಪಲ್ ಹೆಜ್’ ರೆಸ್ಟೋರೆಂಟ್ ಮತ್ತು ಪಬ್ಗೆ ಪಾರ್ಟಿ ಮಾಡಲು ತೆರಳಿದ್ದರು. ಪಾರ್ಟಿ ಮುಗಿಸಿ ತಡರಾತ್ರಿ ಪಬ್ನಿಂದ ಹೊರಬರುತ್ತಿದ್ದ ಸಮಯದಲ್ಲಿ, ಅಲ್ಲಿಗೆ ಬಂದಿದ್ದ ಟ್ಯಾಂಕ್ ರಾಕಿ ಹಾಗೂ ಆತನ ಸಹಚರರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ಆರಂಭವಾಗಿದೆ.
ಗಲಾಟೆ ತೀವ್ರಗೊಂಡಾಗ ಆರೋಪಿಗಳು ನಿಶಾಂತ್ ಮೇಲೆ ಹಲ್ಲೆ ನಡೆಸಿ, ಪಬ್ನ ಎರಡನೇ ಮಹಡಿಯಿಂದ ಕೆಳಕ್ಕೆ ತಳ್ಳಿದ್ದಾರೆ ಎನ್ನಲಾಗಿದೆ. ಎರಡನೇ ಮಹಡಿಯಿಂದ ಬಿದ್ದ ರಭಸಕ್ಕೆ ನಿಶಾಂತ್ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆ ನಡೆದ ಬೆನ್ನಲ್ಲೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಮೃತ ನಿಶಾಂತ್ ಅವರ ಸ್ನೇಹಿತರ ಮಾಹಿತಿಯ ಆಧಾರದ ಮೇಲೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಟ್ಯಾಂಕ್ ರಾಕಿ ಮತ್ತು ಆತನ ಸಹಚರರಿಗಾಗಿ ಪೊಲೀಸರು ಬಲೆ ಬೀಸಿದ್ದು, ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
ನಗರದ ಹೃದಯಭಾಗದಲ್ಲಿರುವ ಪಬ್ನಲ್ಲಿ ಇಂತಹ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.