Skip to main content

Police Roundup

ಮಂಗಳೂರು: ಬೃಹತ್ ಡ್ರಗ್ಸ್ ಜಾಲ ಪತ್ತೆ; ಇಬ್ಬರು ಪೆಡ್ಲರ್‌ಗಳ ಬಂಧನ, ₹46.50 ಲಕ್ಷ ಮೌಲ್ಯದ ಮಾಲು ವಶ

Share News

ಮಂಗಳೂರು: ನಗರದಲ್ಲಿ ಬೃಹತ್ ಪ್ರಮಾಣದಲ್ಲಿ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಜೆಪ್ಪಿನಮೊಗರು ಬಳಿ ದಾಳಿ ನಡೆಸಿ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ಸುಮಾರು 46.50 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ (MDMA) ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

 

ಬಂಧಿತರನ್ನು ಪೆರ್ಮನ್ನೂರು ಅಂಚೆ ಪಿಲಾರು ನಿವಾಸಿಗಳಾದ ದಾವೂದ್ ಪರ್ವೇಜ್ (40) ಮತ್ತು ನಜರತ್ ಅಲಿ (37) ಎಂದು ಗುರುತಿಸಲಾಗಿದೆ. ಆರೋಪಿ ಫರ್ವೇಜ್ ಹಳೆಯ ಪಾತಕಿಯಾಗಿದ್ದು, ಈತನ ಮೇಲೆ ಈಗಾಗಲೇ ಪಾಂಡೇಶ್ವರ, ಬಂದರು, ಬೆಂಗಳೂರಿನ ಅಮೃತಹಳ್ಳಿ ಹಾಗೂ ಉಡುಪಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಡ್ರಗ್ಸ್ ಮಾರಾಟಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.

 

ಏಪ್ರಿಲ್ 19 ರಂದು ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಬೃಹತ್ ಪ್ರಮಾಣದ ಮಾದಕ ದ್ರವ್ಯವನ್ನು ಮಾರಾಟ ಮಾಡಲು ಜೆಪ್ಪಿನಮೊಗರು ಕಡೆಗೆ ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಂಕನಾಡಿ ನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

 

ತನಿಖೆಯ ವೇಳೆ, ಪ್ರಮುಖ ಆರೋಪಿ ಪರ್ವೇಜ್ ಹೊರ ಜಿಲ್ಲೆಗಳಿಂದ ಮಾದಕ ದ್ರವ್ಯವನ್ನು ತಂದು, ಮಂಗಳೂರಿನ ಯುವ ಸಮುದಾಯ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದ ಎಂಬ ಭಯಾನಕ ಸತ್ಯ ಬೆಳಕಿಗೆ ಬಂದಿದೆ. ಈತನಿಗೆ ನಜರತ್ ಅಲಿ ಈ ಅಕ್ರಮ ದಂಧೆಯಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

 

​ಕಂಕನಾಡಿ ನಗರ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಈ ಜಾಲದ ಹಿಂದೆ ಬೇರೆ ಯಾರಾದರೂ ಪ್ರಭಾವಿಗಳ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin