ಬೆಂಗಳೂರು: ಸರ್ಕಾರಿ ಸಂಸ್ಥೆಗಳಲ್ಲಿನ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ ಮಹಿಳೆಯೊಬ್ಬರ ವಿರುದ್ಧ ದುಷ್ಕರ್ಮಿಗಳು ವ್ಯವಸ್ಥಿತವಾಗಿ ತೇಜೋವಧೆ ಮಾಡುತ್ತಿರುವ ಘಟನೆ ನಗರದ ಬಸವನಗರ ಮತ್ತು ತಲಕಾವೇರಿ ಲೇಔಟ್ ವ್ಯಾಪ್ತಿಯಲ್ಲಿ ವರದಿಯಾಗಿದೆ.
ವಿಭೂತಿಪುರ ರಾಜಾಕಾಲುವೆ ಒತ್ತುವರಿ ನಡೆದಿದೆ ಎಂದು ಆರೋಪಿಸಿ ಸತ್ಯವಾಣಿ ಎಂಬುವವರು ಈ ಹಿಂದೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದರ ಜೊತೆಗೆ ಜಿಬಿಎ (GBA) ಟಿಕೆಟ್ ಆಕಾಂಕ್ಷಿಯೂ ಆಗಿರುವ ಇವರು, ಏರಿಯಾದಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ಬ್ಯಾನರ್‌ಗಳ ವಿರುದ್ಧ ಜಿಬಿಎಗೆ ದೂರು ನೀಡಿ ಅವುಗಳನ್ನು ತೆರವುಗೊಳಿಸಿದ್ದರು. ಈ ದ್ವೇಷದ ಹಿನ್ನೆಲೆಯಲ್ಲಿ ಈಗ ಸತ್ಯವಾಣಿ ಅವರ ವಿರುದ್ಧವೇ 50ಕ್ಕೂ ಹೆಚ್ಚು ಅವಹೇಳನಕಾರಿ ಬ್ಯಾನರ್‌ಗಳನ್ನು ರಾತ್ರೋರಾತ್ರಿ ಅಳವಡಿಸಲಾಗಿದೆ.
ಸತ್ಯವಾಣಿ ಅವರನ್ನು “ವಂಚಕಿ” ಹಾಗೂ “ಹಣ ವಸೂಲಿ ಮಾಡುವವರು” ಎಂದು ಬಿಂಬಿಸಿ ಬ್ಯಾನರ್‌ನಲ್ಲಿ ಬರೆಯಲಾಗಿದೆ. ಅಲ್ಲದೆ, ಕಟ್ಟಡ ಕಟ್ಟಲು ಬಿಡುವುದಿಲ್ಲ ಮತ್ತು ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂಬ ಸುಳ್ಳು ಆರೋಪಗಳನ್ನು ಹೊರಿಸಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿದೆ.
ಪೊಲೀಸ್ ಮತ್ತು ಅಧಿಕಾರಿಗಳ ವಿರುದ್ಧ ಅಸಮಾಧಾನ:
ಬ್ಯಾನರ್ ಅಳವಡಿಸುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದರೂ ಸಹ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಜಿಬಿಎ ಕಮಿಷನರ್ ವಿರುದ್ಧವೂ ಲೋಕಾಯುಕ್ತಕ್ಕೆ ದೂರು ನೀಡಿರುವುದರಿಂದ, ಈ ಕುಕೃತ್ಯದಲ್ಲಿ ಅವರ ಪಾತ್ರವೂ ಇರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೆಚ್.ಎ.ಎಲ್ (HAL) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಪೊಲೀಸರು ಇದುವರೆಗೆ ಯಾರನ್ನೂ ಬಂಧಿಸಿಲ್ಲ ಮತ್ತು ಬ್ಯಾನರ್ ಹಾಕಿದವರ ವಿರುದ್ಧ ಕಠಿಣ ಕ್ರಮ ಜರುಗಿಸಿಲ್ಲ ಎಂದು ಸತ್ಯವಾಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ತನಗೆ ರಕ್ಷಣೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.