ಕುಶಾಲನಗರ: ಅಪಾಯಕಾರಿ ಹಾಗೂ ಅಸುರಕ್ಷಿತ ರೀತಿಯಲ್ಲಿ ಟಿಂಬರ್ (ಮರ) ಹೇರಿಕೊಂಡು ಸಂಚರಿಸುತ್ತಿದ್ದ ನಾಲ್ಕು ಟಿಂಬರ್ ಲಾರಿಗಳನ್ನು ಕುಶಾಲನಗರ ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ತೂಕ (ಓವರ್ಲೋಡ್) ಹಾಗೂ ಸಂಪೂರ್ಣ ಲಾರಿಯ ಮಿತಿಗಿಂತ ಹೊರಕ್ಕೆ ಚಾಚಿಕೊಂಡಿರುವ ರೀತಿಯಲ್ಲಿ ಅಪಾಯಕಾರಿಯಾಗಿ ಮರಗಳನ್ನು ತುಂಬಿಕೊಂಡು ಸಂಚರಿಸುತ್ತಿದ್ದಾಗ ಈ ಕ್ರಮ ಕೈಗೊಳ್ಳಲಾಗಿದೆ.
ಕುಶಾಲನಗರ ಪೊಲೀಸ್ ನಿರೀಕ್ಷಕ ಪ್ರದೀಪ್ ಕುಮಾರ್ ಅವರ ನೇತೃತ್ವದಲ್ಲಿ ಮಂಗಳವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಸಂಚಾರಿ ಪೊಲೀಸ್ ತಂಡ, ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಈ ನಾಲ್ಕೂ ಲಾರಿಗಳನ್ನು ತಡೆದು ವಶಕ್ಕೆ ಪಡೆದಿದೆ.
ಸಾರ್ವಜನಿಕರ ಹಾಗೂ ರಸ್ತೆ ಸಂಚಾರದ ಸುರಕ್ಷತೆಗೆ ಭಂಗ ತರುವ ರೀತಿಯಲ್ಲಿ ಭಾರೀ ಗಾತ್ರದ ಮರಗಳನ್ನು ಕೊಂಡೊಯ್ಯುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ಪೊಲೀಸರು ಎಚ್ಚರಿಸಿದ್ದಾರೆ.