ದೇವರಹಿಪ್ಪರಗಿ: ಪುದುಚೇರಿಯಲ್ಲಿ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ್ದ 37ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸ್ಥಳೀಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅವಿನಾಶ್ ಮಲ್ಲಿಕಾರ್ಜುನ ತಳಕೇರಿ ಚಕ್ರ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅವಿನಾಶ್ ಅವರು ಚಕ್ರವನ್ನು 51.02 ಮೀಟರ್ ದೂರ ಎಸೆಯುವ ಮೂಲಕ ಪ್ರಥಮ ಸ್ಥಾನ ಪಡೆದು ಈ ಅದ್ಭುತ ಸಾಧನೆ ಮಾಡಿದ್ದಾರೆ. ಶಿಕ್ಷಕರ ಪುತ್ರರಾಗಿರುವ ಇವರು ವಿಜಯಪುರ ಜಿಲ್ಲೆಯ ಪರವಾಗಿ ಸತತ ಏಳನೇ ಬಾರಿಗೆ ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ್ದು, ಈ ಕ್ರೀಡಾಕೂಟದಲ್ಲಿ ಮೂರನೇ ಬಾರಿಗೆ ಭಾಗವಹಿಸಿ ತಮ್ಮ ಕಠಿಣ ಪರಿಶ್ರಮದಿಂದ ಈ ಹೆಮ್ಮೆಯ ಕ್ಷಣವನ್ನು ತಂದಿಟ್ಟಿದ್ದಾರೆ.
ವಿದ್ಯಾರ್ಥಿಯ ಈ ಸಾಧನೆಯು ವಿಜಯಪುರ ಜಿಲ್ಲೆ ಹಾಗೂ ದೇವರಹಿಪ್ಪರಗಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದೆ. ಈ ವೇಳೆ ಕಾಲೇಜು ಸಂಸ್ಥೆಯ ಅಧ್ಯಕ್ಷ ವಿ.ಕೆ. ಪಾಟೀಲ, ತರಬೇತುದಾರರಾದ ಹಾಜಿಲಾಲ್ ಮಕಾಂದರ್, ರಾಜು ಕಾಖಂಡಕಿ ಸೇರಿದಂತೆ ಹಲವು ಗಣ್ಯರು ಹಾಗೂ ಕ್ರೀಡಾಭಿಮಾನಿಗಳು ಹರ್ಷ ವ್ಯಕ್ತಪಡಿಸಿ, ಮುಂದಿನ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲೂ ಉತ್ತಮ ಪ್ರದರ್ಶನ ನೀಡಲಿ ಎಂದು ಶುಭ ಹಾರೈಸಿದ್ದಾರೆ.