ಪೊನ್ನುರು (ಆಂಧ್ರಪ್ರದೇಶ): ಹಣ ಮತ್ತು ಚಿನ್ನದ ಆಸೆಗೆ ಕರುಳಿನ ಕಡಿಯನ್ನೇ ಮರೆತ ಮಗಳು ಹಾಗೂ ಆಕೆಯ ಪತಿ ಸೇರಿ ಸ್ವಂತ ತಾಯಿಯನ್ನೇ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪೊನ್ನುರು ಪಟ್ಟಣದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಮಗಳು ಪುಷ್ಪಲತಾ ಹಾಗೂ ಆಕೆಯ ಮೂರನೇ ಪತಿ ರಾಜ್‌ಕುಮಾರ್ ಅವರನ್ನು ಪೊನ್ನುರು ನಗರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ಘಟನೆಯ ವಿವರ:
ಪೊನ್ನುರು ಕ್ಯಾಬಿನ್‌ಪೇಟೆ ನಿವಾಸಿ ಲಕ್ಷ್ಮಿ (45) ಎಂಬುವವರು ಸ್ಥಳೀಯ ಆಸ್ಪತ್ರೆಯಲ್ಲಿ ‘ಆಯಾ’ ಆಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಇವರ ಮಗಳು ಪುಷ್ಪಲತಾ ಮೊದಲ ಪತಿಯಿಂದ ದೂರವಾದ ಬಳಿಕ, ಆಕೆಯ ಮಗನನ್ನು ಅಜ್ಜಿ ಲಕ್ಷ್ಮಿ ಅವರೇ ಸಾಕುತ್ತಿದ್ದರು. ತರುವಾಯ ಹೈದರಾಬಾದ್‌ನಲ್ಲಿ ಎರಡನೇ ಮದುವೆಯಾಗಿದ್ದ ಪುಷ್ಪಲತಾ, ಆ ಪತಿ ಮೃತಪಟ್ಟ ನಂತರ ಪೊನ್ನುರಿಗೆ ಮರಳಿದ್ದಳು. ಬಳಿಕ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ರಾಜ್‌ಕುಮಾರ್ ಎಂಬಾತನನ್ನು ಮೂರನೇ ಮದುವೆಯಾಗಿ ತಾಯಿಯ ಮನೆಯಲ್ಲೇ ವಾಸಿಸುತ್ತಿದ್ದಳು.
ಕೊಲೆಗೆ ಕಾರಣವಾದ ವಿಮಾ ಹಣ, ಚಿನ್ನದ ಸರದ ವಿವಾದ:
ಮೂರು ತಿಂಗಳ ಹಿಂದೆ ಲಕ್ಷ್ಮಿ ಅವರ ಮಗ (ಪುಷ್ಪಲತಾಳ ತಮ್ಮ) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದನು. ಆತನ ಮರಣದ ನಂತರ ಬಂದಿದ್ದ ವಿಮಾ (Insurance) ಹಣದಲ್ಲಿ ಪಾಲು ನೀಡುವಂತೆ ಪುಷ್ಪಲತಾ ತಾಯಿಯ ಬಳಿ ನಿರಂತರವಾಗಿ ಜಗಳವಾಡುತ್ತಿದ್ದಳು. ಆದರೆ ಲಕ್ಷ್ಮಿ ಆ ಹಣದಿಂದ ತಾನು ಹಿಂದೆ ಗಿರವಿ ಇಟ್ಟಿದ್ದ ಚಿನ್ನದ ಸರವನ್ನು ಬಿಡಿಸಿಕೊಂಡಿದ್ದರು.
ಇದರಿಂದ ಆಕ್ರೋಶಗೊಂಡ ಪುಷ್ಪಲತಾ, ಆ ಚಿನ್ನದ ಸರವನ್ನು ತನಗೇ ನೀಡಬೇಕೆಂದು ಪಟ್ಟುಹಿಡಿದಿದ್ದಳು. ಲಕ್ಷ್ಮಿ ಸರ ನೀಡಲು ನಿರಾಕರಿಸಿ, ಮನೆ ಖಾಲಿ ಮಾಡುವಂತೆ ಸೂಚಿಸಿದಾಗ, ಕೋಪಗೊಂಡ ಮಗಳು ಹಾಗೂ ಆಕೆಯ ಪತಿ ರಾಜ್‌ಕುಮಾರ್ ಸೇರಿ ಲಕ್ಷ್ಮಿ ಅವರನ್ನು ಹತ್ಯೆ ಮಾಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊನ್ನುರು ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.