ನದಿಹರಳಹಳ್ಳಿ (ರಾಣೇಬೆನ್ನೂರು): ತಾಲೂಕಿನ ನದಿಹರಳಹಳ್ಳಿ ಗ್ರಾಮದ ಮುತ್ತಣ್ಣನ ಭಟ್ಟಿ ಸಮೀಪ ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗ್ರಾಮದ ನಿವಾಸಿ ಬಸವರಾಜ ಶೇಖಪ್ಪ ಬುದನೂರು ಗಾಯಗೊಂಡ ಸವಾರ. ಹರಿಹರದಲ್ಲಿ ಕೆಲಸ ಮುಗಿಸಿಕೊಂಡು ಬೈಕ್ನಲ್ಲಿ ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದ ವೇಳೆ, ನದಿಹರಳಹಳ್ಳಿಯಿಂದ ಗ್ರಾವೆಲ್ (ಜಲ್ಲಿ) ತುಂಬಿಕೊಂಡು ಅತಿವೇಗವಾಗಿ ಬಂದ ಟಿಪ್ಪರ್ ಲಾರಿ ಬೈಕ್ಗೆ ನೇರವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದು, ಸವಾರ ಬಸವರಾಜ ರಸ್ತೆ ಬದಿಯ ಚರಂಡಿಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಗಾಯಾಳುವನ್ನು ಚರಂಡಿಯಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.
ಟಿಪ್ಪರ್ಗಳ ವೇಗಕ್ಕೆ ಕಡಿವಾಣ ಹಾಕಲು ಆಗ್ರಹ:
ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು, ಈ ರಸ್ತೆಯಲ್ಲಿ ಜಲ್ಲಿ ಸಾಗಿಸುವ ಟಿಪ್ಪರ್ ಲಾರಿಗಳ ಅತಿವೇಗದ ಚಾಲನೆಯಿಂದಾಗಿ ಸಾರ್ವಜನಿಕರು ಪ್ರತಿನಿತ್ಯ ಭಯದಲ್ಲೇ ಸಂಚರಿಸುವಂತಾಗಿದೆ ಎಂದು ದೂರಿದ್ದಾರೆ. ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಟಿಪ್ಪರ್ಗಳ ವೇಗಕ್ಕೆ ಕಡಿವಾಣ ಹಾಕಬೇಕು ಮತ್ತು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.