ರಾಣೇಬೆನ್ನೂರು: ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ (ಆಹಾರ) ಗೋದಾಮಿನಲ್ಲೇ ಹಮಾಲಿ ಕಾರ್ಮಿಕರ ಹಕ್ಕುಗಳ ದಮನವಾಗುತ್ತಿದ್ದು, ಕಾನೂನುಬದ್ಧ ಸೌಲಭ್ಯಗಳಿಂದ ಅವರನ್ನು ವಂಚಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತಾಲೂಕಿನ ಹುಲಿಹಳ್ಳಿ ಗ್ರಾಮದಲ್ಲಿರುವ 35 ಸಾವಿರ ಟನ್ ಸಾಮರ್ಥ್ಯದ ಉಗ್ರಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ರಜೆ, ಸಾಮಾಜಿಕ ಭದ್ರತೆ ಹಾಗೂ ಸೂಕ್ತ ಕೂಲಿ ಸಿಗುತ್ತಿಲ್ಲ ಎಂದು ಕಾರ್ಮಿಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಜೆ ಕೇಳಿದರೆ ಕೆಲಸ ಕಳೆದುಕೊಳ್ಳುವ ಭೀತಿ
ಹುಲಿಹಳ್ಳಿ ಉಗ್ರಾಣದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸುಮಾರು 60ಕ್ಕೂ ಹೆಚ್ಚು ಕಾರ್ಮಿಕರು ದಿನಂಪ್ರತಿ 60 ಕೆ.ಜಿ. ತೂಕದ ಅಕ್ಕಿ ಚೀಲಗಳನ್ನು ಹೊತ್ತು ಸಾಗಿಸುವ ಶ್ರಮದಾಯಕ ಕೆಲಸ ಮಾಡುತ್ತಿದ್ದಾರೆ. ಆದರೆ, ಇಂತಹ ಕಠಿಣ ಕೆಲಸ ಮಾಡುವ ಕಾರ್ಮಿಕರಿಗೆ ವಾರದ ರಜೆಯನ್ನೂ ನೀಡಲಾಗುತ್ತಿಲ್ಲ. ಒಂದು ವೇಳೆ ರಜೆ ಕೇಳಿದರೆ “ಕೆಲಸಕ್ಕೇ ಬರಬೇಡಿ” ಎಂದು ಗುತ್ತಿಗೆದಾರ ಆರ್.ಎಸ್. ಮನ್ನಂಗಿ ಅವರು ಬೆದರಿಕೆ ಹಾಕುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದ್ದಾರೆ.
25 ಮಂದಿಗಷ್ಟೇ PF-ESI ಭಾಗ್ಯ!
ಉಗ್ರಾಣದಲ್ಲಿ ದುಡಿಯುತ್ತಿರುವ 60 ಕಾರ್ಮಿಕರಲ್ಲಿ ಕೇವಲ 25 ಮಂದಿಗೆ ಮಾತ್ರ ಪಿಎಫ್ (PF) ಹಾಗೂ ಇಎಸ್ಐ (ESI) ಸೌಲಭ್ಯ ಕಲ್ಪಿಸಲಾಗಿದ್ದು, ಉಳಿದವರನ್ನು ಸಾಮಾಜಿಕ ಭದ್ರತೆಯಿಂದ ಹೊರಗಿಡಲಾಗಿದೆ. ಕೆಲಸದ ವೇಳೆ ಯಾವುದೇ ಅಹಿತಕರ ಘಟನೆ ಅಥವಾ ಅಪಘಾತ ಸಂಭವಿಸಿದರೆ ಕಾರ್ಮಿಕ ಕುಟುಂಬಗಳ ಭವಿಷ್ಯವೇ ಗತಿಯಿಲ್ಲದಂತಾಗುತ್ತದೆ. ಅಲ್ಲದೆ, ಸರ್ಕಾರ ನಿಗದಿಪಡಿಸಿರುವ ಲೋಡಿಂಗ್-ಅನ್ಲೋಡಿಂಗ್ ದರವೂ ಕಾರ್ಮಿಕರ ಕೈಸೇರುತ್ತಿಲ್ಲ.
ರಾಜ್ಯಮಟ್ಟದ ತನಿಖೆಗೆ ಒತ್ತಾಯ
ಕಾರ್ಮಿಕ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ತಕ್ಷಣವೇ ಹುಲಿಹಳ್ಳಿ ಉಗ್ರಾಣದ ಅಕ್ರಮಗಳ ಕುರಿತು ರಾಜ್ಯಮಟ್ಟದ ಸಮಗ್ರ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕಾರ್ಮಿಕ ಮುಖಂಡರಾದ ಜಗದೀಶ್ ಕೆರೋಡಿ, ಹನುಮಂತಪ್ಪ ಹಲವಾಗಲ್, ಮಾಲತೇಶ್ ಹಲಗೆರಿ, ಕೆಂಚಪ್ಪ ಬುಳ್ಳಪ್ಪನವರ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.
ಕಾರ್ಮಿಕರ ಬೆವರಿನಿಂದ ನಡೆಯುವ ಉಗ್ರಾಣದಲ್ಲಿ ಅವರ ಹಕ್ಕುಗಳೇ ಕಸದ ತೊಟ್ಟಿಗೆ ಬೀಳಬಾರದು; ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಬೇಕು.
”ಸರ್ಕಾರಿ ಅಧೀನದ ಉಗ್ರಾಣದಲ್ಲೇ ಹಮಾಲಿ ಕಾರ್ಮಿಕರ ಹಕ್ಕುಗಳಿಗೆ ರಕ್ಷಣೆ ಇಲ್ಲದಿರುವುದು ಆತಂಕಕಾರಿ. ವಾರದ ರಜೆ, ಪಿಎಫ್–ಇ ಎಸ್ ಐ, ಸುರಕ್ಷತೆ ಹಾಗೂ ಸರ್ಕಾರ ನಿಗದಿಪಡಿಸಿದ ಕೂಲಿ ಸೇರಿದಂತೆ ಕಾರ್ಮಿಕರಿಗೆ ಕಾನೂನುಬದ್ಧ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಬೇಕು. ಶೋಷಣೆಯ ಆರೋಪಗಳ ಬಗ್ಗೆ ರಾಜ್ಯಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.”
— ಜಗದೀಶ್ ಕೆರೋಡಿ, ತಾಲೂಕು ಕಾರ್ಮಿಕ ಮುಖಂಡ, ರಾಣೇಬೆನ್ನೂರು