ಲಿಂಗಸುಗೂರು: ಪ್ರೀತಿ ಹಾಗೂ ಮದುವೆಯ ಭರವಸೆ ನೀಡಿ ಯುವತಿಯೊಬ್ಬಳನ್ನು ದಶಕದ ಕಾಲ ನಂಬಿಸಿ, ಈಗ ಬೇರೊಬ್ಬ ಯುವತಿಯೊಂದಿಗೆ ಮದುವೆಯಾಗಲು ಸಜ್ಜಾಗಿರುವ ಯುವಕನ ವಿರುದ್ಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಲಿಂಗಸುಗೂರು ಪಟ್ಟಣದ ನಿವಾಸಿ ಶಿವು (ಶಿವಕುಮಾರ್) ಎಂಬಾತ ಕಳೆದ 10 ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆಕೆಯನ್ನು ವಿವಾಹವಾಗುವುದಾಗಿ ನಂಬಿಸಿ ಹತ್ತಿರವಾಗಿದ್ದನು. ಹತ್ತು ವರ್ಷಗಳ ಸುದೀರ್ಘ ಸಂಬಂಧದ ನಂತರ, ಈಗ ಸಂತ್ರಸ್ತೆಯನ್ನು ಕೈಬಿಟ್ಟು ಬೇರೊಬ್ಬ ಯುವತಿಯನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ತನ್ನನ್ನು ಮದುವೆಯಾಗುವಂತೆ ಕೇಳಲು ಹೋದ ಸಂತ್ರಸ್ತೆಗೆ ಆರೋಪಿ ಶಿವಕುಮಾರ್ ಮತ್ತು ಆತನ ಕುಟುಂಬಸ್ಥರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಒಂದು ದಶಕದ ಕಾಲ ಪ್ರೀತಿಯ ನಾಟಕವಾಡಿ ಈಗ ತನ್ನ ಬದುಕನ್ನು ಬೀದಿಗೆ ತಳ್ಳಿದ್ದಾನೆ ಎಂದು ಯುವತಿ ಕಣ್ಣೀರಿಟ್ಟಿದ್ದಾರೆ.
ಮದುವೆ ಹೆಸರಿನಲ್ಲಿ ವಂಚನೆಗೊಳಗಾದ ಯುವತಿ ಈಗ ತನಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಬೀದಿಗಿಳಿದಿದ್ದಾರೆ. ಈ ಸಂಬಂಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ದಶಕದ ಕಾಲ ಭಾವನೆಗಳೊಂದಿಗೆ ಆಟವಾಡಿ ವಂಚಿಸಿದ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಲಿ ಎಂಬುದು ಸಾರ್ವಜನಿಕ ವಲಯದ ಆಕ್ರೋಶವಾಗಿದೆ.