ಹಾಸನ: ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಸಾಫ್ಟ್‌ವೇರ್ ಇಂಜಿನಿಯರ್ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಖತರ್ನಾಕ್ ಆರೋಪಿಯನ್ನು ಹಾಸನದ ಬಡಾವಣೆ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಹಾಸನದ ಚನ್ನಪಟ್ಟಣ ಬಡಾವಣೆಯ ನಿವಾಸಿ ವರುಣ್ (27) ಬಂಧಿತ ಆರೋಪಿಯಾಗಿದ್ದಾನೆ. ಮೇ 12ರ ಸಂಜೆ ಹಾಸನದ ಕೆ.ಆರ್ ಪುರಂ ಬಡಾವಣೆಯಲ್ಲಿರುವ ‘ಎಂಜೆ ಜಿಮ್’ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಕೀರ್ತನ್ ಎಂಬುವವರ ಮೇಲೆ ಈತ ಜಿಮ್ ವರ್ಕೌಟ್ ವೇಳೆ ಭೀಕರವಾಗಿ ಹಲ್ಲೆ ನಡೆಸಿದ್ದನು.
ಮೇ 12 ರಂದು ಸಂಜೆ ಎಂಜೆ ಜಿಮ್‌ನಲ್ಲಿ ಟೆಕ್ಕಿ ಕೀರ್ತನ್ ವರ್ಕೌಟ್ ಮಾಡುತ್ತಿದ್ದಾಗ ಸ್ಥಳಕ್ಕೆ ಬಂದ ಆರೋಪಿ ವರುಣ್, ತೀವ್ರ ಸ್ವರೂಪದ ಗಲಾಟೆ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ವರುಣ್, ಕೀರ್ತನ್ ಅವರ ತಲೆ ಹಾಗೂ ಮುಖದ ಭಾಗಕ್ಕೆ ಮನಬಂದಂತೆ ಪಂಚ್ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಆರೋಪಿಯ ಭೀಕರ ಪಂಚ್ ಏಟಿಗೆ ಟೆಕ್ಕಿ ಕೀರ್ತನ್ ಅವರ ಮುಖದ ಮೂಳೆ ಮುರಿದು ಹೋಗಿದ್ದು, ತೀವ್ರ ರಕ್ತಸ್ರಾವದಿಂದ ಅವರು ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರು.
ಕೀರ್ತನ್ ಮೇಲೆ ಕೊಲೆ ಯತ್ನ ನಡೆಸಿ ಆರೋಪಿ ವರುಣ್ ಸ್ಥಳದಿಂದ ಎಸ್ಕೇಪ್ ಆಗಿದ್ದನು. ಈ ಸಂಬಂಧ ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ (Attempt to Murder) ಪ್ರಕರಣ ದಾಖಲಾಗಿತ್ತು. ಘಟನೆ ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿ ವರುಣ್ ಬೆಂಗಳೂರಿಗೆ ಓಡಿ ಹೋಗಿ ತಲೆಮರೆಸಿಕೊಂಡಿದ್ದನು.
ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದ ಬಡಾವಣೆ ಠಾಣೆಯ ಪೊಲೀಸರು, ನಿಖರ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಿ ಅಡಗಿದ್ದ ಆರೋಪಿ ವರುಣ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.