ಚಿತ್ರದುರ್ಗ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ಬಳಸಿ, ಗರ್ಭಿಣಿ ಮಾಡಿ ಇದೀಗ ಕೈಕೊಟ್ಟಿರುವ ಆಘಾತಕಾರಿ ಘಟನೆಯೊಂದು ಕೋಟೆ ನಾಡು ಚಿತ್ರದುರ್ಗದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆ (DAR) ವಿಭಾಗದ ಆರ್‌ಎಸ್‌ಐ (ರಿಸರ್ವ್ ಸಬ್ ಇನ್ಸ್‌ಪೆಕ್ಟರ್) ವರುಣ್ ಕುಮಾರ್ ವಿರುದ್ಧ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದಾವಣಗೆರೆ ಮೂಲದ ಪೂರ್ಣಿಮಾ (ಹೆಸರು ಬದಲಾಯಿಸಲಾಗಿದೆ) ಎಂಬ ಸಂತ್ರಸ್ತ ಯುವತಿಯು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಪೊಲೀಸ್ ತರಬೇತಿಗಾಗಿ ಬೆಂಗಳೂರಿಗೆ ತೆರಳಿದ್ದ ಆರ್‌ಎಸ್‌ಐ ವರುಣ್ ಕುಮಾರ್ ಜೊತೆ ಇನ್‌ಸ್ಟಾಗ್ರಾಮ್‌ನಲ್ಲಿ ಈಕೆಗೆ ಪರಿಚಯವಾಗಿತ್ತು. ಈ ಪರಿಚಯ ದಿನ ಕಳೆದಂತೆ ಪ್ರೀತಿಯಾಗಿ ಬದಲಾಗಿದ್ದು, ಇಬ್ಬರೂ ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ತನ್ನನ್ನು ಮದುವೆಯಾಗುವುದಾಗಿ ನಂಬಿಸಿದ್ದ ವರುಣ್ ಕುಮಾರ್, ಯುವತಿಯ ಜೊತೆ ನಿರಂತರವಾಗಿ ಲೈಂಗಿಕ ಸಂಬಂಧ ಬೆಳೆಸಿದ್ದನು. ಈ ನಡುವೆ ಯುವತಿ ಗರ್ಭಿಣಿಯಾಗಿದ್ದು, ಮದುವೆ ಆಗುವಂತೆ ವರುಣ್‌ನನ್ನು ಒತ್ತಾಯಿಸಿದ್ದಾರೆ. ಆದರೆ, ಆರೋಪಿ ವರುಣ್ ಕುಮಾರ್ ಆಕೆಗೆ ಬಲವಂತವಾಗಿ ಗರ್ಭಪಾತದ ಮಾತ್ರೆಗಳನ್ನು ನೀಡಿ ನಂಬಿಕೆ ದ್ರೋಹ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ಗಂಭೀರವಾಗಿ ಆರೋಪಿಸಿದ್ದಾರೆ.
ತನ್ನನ್ನು ಪ್ರೀತಿಯ ಹೆಸರಿನಲ್ಲಿ ಲೈಂಗಿಕವಾಗಿ ಬಳಸಿ, ನಂಬಿಸಿ ಕುತ್ತಿಗೆ ಕುಯ್ದಿರುವ ಆರ್‌ಎಸ್‌ಐ ವರುಣ್ ಕುಮಾರ್ ವಿರುದ್ಧ ನೊಂದ ಯುವತಿ ಚಿತ್ರದುರ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಕಾನೂನು ಕ್ರಮದ ಭೀತಿಯಿಂದ ಆರೋಪಿ ವರುಣ್ ಕುಮಾರ್ ನಾಪತ್ತೆಯಾಗಿದ್ದಾನೆ.
ಸಂತ್ರಸ್ತೆ ಪೂರ್ಣಿಮಾ ಅವರು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರಂಜಿತ್ ಕುಮಾರ್ ಅವರನ್ನು ಖುದ್ದಾಗಿ ಭೇಟಿ ಮಾಡಿ, ತನಗೆ ಆದ ಅನ್ಯಾಯವನ್ನು ವಿವರಿಸಿ ನ್ಯಾಯ ಕೊಡಿಸುವಂತೆ ಮತ್ತು ನಾಪತ್ತೆಯಾಗಿರುವ ಆರೋಪಿ ಆರ್‌ಎಸ್‌ಐ ವರುಣ್ ಕುಮಾರ್‌ನನ್ನು ತಕ್ಷಣವೇ ಬಂಧಿಸುವಂತೆ ಕಣ್ಣೀರು ಹಾಕುತ್ತಾ ಮನವಿ ಮಾಡಿದ್ದಾರೆ. ಸದ್ಯ ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತಲೆಮರೆಸಿಕೊಂಡಿರುವ ಅಧಿಕಾರಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ.
