ನೆಲ್ಯಹುದಿಕೇರಿ: ಖಚಿತ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಅಕ್ರಮವಾಗಿ ಶ್ರೀಗಂಧದ ಮರ ಕಡಿದು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ, 55 ಕೆಜಿ ಹಸಿ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ.
ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆ ಪೈಸಾರಿ ಗ್ರಾಮದ ನಿವಾಸಿ ಚಂದ್ರ ಎಂ.ಎಂ. (47) ಹಾಗೂ ಜಲ್ಲಕಟ್ಟೆ ಗ್ರಾಮದ ನಿವಾಸಿ ಉಮೇಶ ಹೆಚ್.ಪಿ. (27) ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನುಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ.
ಘಟನೆಯ ವಿವರ:
ನೆಲ್ಯಹುದಿಕೇರಿ ಗ್ರಾಮದ ಕೆ.ಎಂ. ಪ್ರಕಾಶ್ ಎಂಬುವರ ಜಾಗದಲ್ಲಿದ್ದ ಶ್ರೀಗಂಧದ ಮರವನ್ನು ಅಕ್ರಮವಾಗಿ ಕಡಿದು ಕಳವು ಮಾಡಲಾಗಿತ್ತು. ಕದ್ದ ಮರವನ್ನು ತಂದು, ಅದರ ಚಕ್ಕೆ ಹಾಗೂ ಛೇಗು ಬೇರ್ಪಡಿಸಿ ಶುಚಿಗೊಳಿಸುತ್ತಿದ್ದ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ 20 ಕೆಜಿ ತೂಕದ ಗಂಧದ ಕೊರಡು, 15 ಕೆಜಿ ಗಂಧದ ತುಂಡುಗಳು ಹಾಗೂ 20 ಕೆಜಿ ಗಂಧದ ಚಕ್ಕೆ ಸೇರಿದಂತೆ ಒಟ್ಟು 55 ಕೆಜಿ ತೂಕದ ಹಸಿ ಶ್ರೀಗಂಧವನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆ ತಂಡ:
ವಿರಾಜಪೇಟೆ ಡಿ.ಸಿ.ಎಫ್. ವಿನಿತಾ ಚೌಹಾಣ್ ಹಾಗೂ ಎ.ಸಿ.ಎಫ್. ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ, ಆರ್.ಎಫ್.ಓ. ರಾಕೇಶ್ ಮತ್ತು ಡಿ.ಆರ್.ಎಫ್.ಓ. ಶಶಿ ಅವರ ನೇತೃತ್ವದ ತಂಡ ಈ ದಾಳಿ ನಡೆಸಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕ ರಾಜೇಶ್, ಆರ್.ಆರ್.ಟಿ. ತಂಡದ ರೋಷನ್, ಪ್ರದೀಪ್, ಪ್ರವೀಣ್, ನಿತಿನ್, ಮಂಜು, ಪ್ರಮೋದ್ ಹಾಗೂ ಚಾಲಕ ಸಂಜು ಭಾಗವಹಿಸಿದ್ದರು.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ಮುಂದಿನ ತನಿಖೆಯನ್ನು ಕೈಗೊಂಡಿದೆ.