Skip to main content

Police Roundup

ಸಾಲದ ಹಣಕ್ಕಾಗಿ ಸ್ವಂತ ತಂಗಿಯನ್ನೇ ಅಪಹರಿಸಿ ಹಲ್ಲೆ ನಡೆಸಿದ ಅಕ್ಕ-ಭಾವ: ಚಂದ್ರಾ ಲೇಔಟ್ ಪೊಲೀಸರಿಂದ ಆರೋಪಿಗಳ ಬಂಧನ

Share News

ಬೆಂಗಳೂರು: ಸಾಲವಾಗಿ ಪಡೆದಿದ್ದ ಹಣವನ್ನು ಮರಳಿ ನೀಡಲಿಲ್ಲ ಎಂಬ ಕಾರಣಕ್ಕೆ ಸ್ವಂತ ಅಕ್ಕ ಮತ್ತು ಭಾವ ಸೇರಿ ತಂಗಿ ಹಾಗೂ ಆಕೆಯ ಪತಿಯನ್ನು ಅಪಹರಿಸಿ, ಕ್ರೂರವಾಗಿ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ನಗರದ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

​ಘಟನೆಯ ವಿವರ:

ಪೃಥ್ವಿ ಎಂಬುವವರು ತಮ್ಮ ಅಕ್ಕ ಪ್ರಫುಲ್ಲಾ ಅವರಿಂದ 9.5 ಲಕ್ಷ ರೂಪಾಯಿ ಸಾಲ ಪಡೆದಿದ್ದರು ಎನ್ನಲಾಗಿದೆ. ಈ ಪೈಕಿ 5 ಲಕ್ಷ ರೂಪಾಯಿಗಳನ್ನು ಮರಳಿ ನೀಡಲಾಗಿದ್ದು, ಇನ್ನು 4.5 ಲಕ್ಷ ರೂಪಾಯಿ ಬಾಕಿ ಇತ್ತು. ಈ ಬಾಕಿ ಹಣದ ವಿಚಾರವಾಗಿ ಅಕ್ಕ-ತಂಗಿಯ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು.

 

ಕಳೆದ ಎರಡು ದಿನಗಳ ಹಿಂದೆ ಅಕ್ಕ ಪ್ರಫುಲ್ಲಾ, ಆಕೆಯ ಪತಿ ಸಲೀಮ್ ಶೇಖ್ ಮತ್ತು ಸಹಚರ ಬೀರೇಶ್ ಎಂಬುವವರು ಹೆಬ್ಬಗೋಡಿಯ ಪೃಥ್ವಿ ಅವರ ಮನೆಗೆ ನುಗ್ಗಿ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ‘ಪೊಲೀಸ್ ಠಾಣೆಗೆ ಹೋಗೋಣ’ ಎಂದು ನಂಬಿಸಿ, ದಂಪತಿಯನ್ನು ಅಪಹರಿಸಿ ತಮ್ಮ ಮನೆಗೆ ಕರೆದೊಯ್ದಿದ್ದಾರೆ. ಅಲ್ಲಿ ದಂಪತಿಯನ್ನು ಕೂಡಿ ಹಾಕಿ ತೀವ್ರವಾಗಿ ಹಲ್ಲೆ ನಡೆಸಿ, ಒಂದು ವೇಳೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

 

ತಂಗಿ ಮತ್ತು ಆಕೆಯ ಪತಿ ಅಭಿತೇಜ್ ನಾಪತ್ತೆಯಾಗಿರುವ ಬಗ್ಗೆ ಅನುಮಾನಗೊಂಡ ಪೃಥ್ವಿ ಅವರ ಸಹೋದರ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಚಂದ್ರಾ ಲೇಔಟ್ ಪೊಲೀಸರು ತನಿಖೆ ನಡೆಸಿ, ಅಪಹರಣಕ್ಕೊಳಗಾಗಿದ್ದ ದಂಪತಿಯನ್ನು ರಕ್ಷಿಸಿದ್ದಾರೆ. ಪ್ರಸ್ತುತ ಹಲ್ಲೆಗೊಳಗಾದ ಪೃಥ್ವಿ ಮತ್ತು ಅಭಿತೇಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

​ಘಟನೆಗೆ ಸಂಬಂಧಿಸಿದಂತೆ ಅಕ್ಕ ಪ್ರಫುಲ್ಲಾ, ಭಾವ ಸಲೀಮ್ ಶೇಖ್ ಹಾಗೂ ಸಹಚರ ಬೀರೇಶ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರಿಸಿದ್ದಾರೆ. ಹಣದ ಹಪಹಪಿಗೆ ರಕ್ತಸಂಬಂಧವನ್ನೇ ಮರೆತು ಕೃತ್ಯವೆಸಗಿದ ಈ ಘಟನೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin