ಬೆಂಗಳೂರು: ಮನೆಯಲ್ಲಿದ್ದ ಕಸವನ್ನು ಎಸೆದು ಬರುತ್ತೇನೆ ಎಂದು ಹೇಳಿ ಹೊರಟ ಮಹಿಳೆಯೊಬ್ಬಳು, ತನ್ನ ಪತಿ ಮತ್ತು ಮಕ್ಕಳಿಗೆ ಊಟದಲ್ಲಿ ನಿದ್ದೆ ಮಾತ್ರೆ ನೀಡಿ ಪ್ರಿಯಕರನ ಜೊತೆ ಪರಾರಿಯಾಗಿರುವ ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.
ನಗರದ ನಿವಾಸಿ ಪ್ರಿಯಾಂಕಾ ಎಂಬಾಕೆ ತನ್ನ ಪತಿ ಶರತ್ ಕುಮಾರ್ ಹಾಗೂ ಮಕ್ಕಳಿಗೆ ದ್ರೋಹ ಎಸಗಿದ ಮಹಿಳೆ. ಈಕೆಗೆ ಕಟಿಂಗ್ ಶಾಪ್ ನಡೆಸುತ್ತಿದ್ದ ಪ್ರಭು ಎಂಬಾತನೊಂದಿಗೆ ಸ್ನೇಹ ಉಂಟಾಗಿತ್ತು. ದಿನ ಕಳೆದಂತೆ ಇವರಿಬ್ಬರ ಸಂಬಂಧ ಪ್ರೇಮಕ್ಕೆ ತಿರುಗಿತ್ತು. ಗಂಡ ಕೆಲಸಕ್ಕೆ ಹೋದ ಸಮಯದಲ್ಲಿ ಪ್ರಿಯಾಂಕಾ ತನ್ನ ಪ್ರಿಯಕರನನ್ನು ಭೇಟಿಯಾಗುತ್ತಿದ್ದಳು ಎನ್ನಲಾಗಿದೆ.
ಪ್ರಭು ಎಂಬಾತ ಪ್ರಿಯಾಂಕಾಳ ಮೊಬೈಲ್‌ಗೆ ರೀಚಾರ್ಜ್ ಮಾಡುತ್ತಿದ್ದ ವಿಚಾರ ಪತಿ ಶರತ್ ಕುಮಾರ್ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಶರತ್ ತನ್ನ ಪತ್ನಿ ಪ್ರಿಯಾಂಕಾಗೆ ಹಲವು ಬಾರಿ ಎಚ್ಚರಿಕೆ ನೀಡಿ ಬುದ್ಧಿ ಹೇಳಿದ್ದರೂ ಸಹ ಆಕೆ ತನ್ನ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದಳು.
ರಾತ್ರಿ ಪ್ರಿಯಾಂಕಾ ತನ್ನ ಪತಿ ಮತ್ತು ಮಕ್ಕಳಿಗೆ ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿದ್ದಾಳೆ ಎನ್ನಲಾಗಿದೆ. ರಾತ್ರಿ ಸುಮಾರು 11.57ರ ವೇಳೆಗೆ ಅವರೆಲ್ಲರೂ ನಿದ್ದೆಯ ಮಂಪರಿನಲ್ಲಿದ್ದಾಗ, ಪ್ರಿಯಾಂಕಾ ಒಂದು ಕೈಯಲ್ಲಿ ಕಸದ ಬಕೆಟ್ ಹಾಗೂ ಮತ್ತೊಂದು ಕೈಯಲ್ಲಿ ಬಟ್ಟೆಗಳ ಬ್ಯಾಗ್ ಹಿಡಿದು ಮನೆಯಿಂದ ಹೊರಬಂದಿದ್ದಾಳೆ. ಈ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಮಧ್ಯರಾತ್ರಿ ಎಚ್ಚರಗೊಂಡ ಪತಿ ಶರತ್, ಪತ್ನಿ ಕಾಣದಿದ್ದಾಗ ಗಾಬರಿಗೊಂಡು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಬಳಿಕ ಈಕೆ ಪ್ರಿಯಕರನೊಂದಿಗೆ ಪರಾರಿಯಾಗಿರುವುದು ಖಚಿತವಾದ ಹಿನ್ನೆಲೆಯಲ್ಲಿ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.