ಬೆಂಗಳೂರು: ರಾತ್ರಿ ವೇಳೆ ಮನೆಗಳ ಬೀಗ ಒಡೆದು ಚಿನ್ನಾಭರಣ ದೋಚುತ್ತಿದ್ದ ಕಳ್ಳ ಹಾಗೂ ಆ ಮಾಲನ್ನು ಅಸಲಿಗಿಂತಲೂ ಅಸಲಿಯಾಗಿ ನಾಟಕವಾಡಿ ಬಚ್ಚಿಡುತ್ತಿದ್ದ ಕಿಲಾಡಿ ಮಹಿಳೆಯನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮುದಾಸಿರ್ ಹಾಗೂ ಕದ್ದ ಮಾಲನ್ನು ಖರೀದಿ ಮಾಡುತ್ತಿದ್ದ ತಬಸ್ಸುಮ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು 10.55 ಲಕ್ಷ ರೂಪಾಯಿ ಮೌಲ್ಯದ 75 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇತ್ತೀಚೆಗೆ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರ ಬೀಗ ಒಡೆದಿದ್ದ ಮುದಾಸಿರ್, ಸುಮಾರು 80 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಾಗ ಆರೋಪಿ ಮುದಾಸಿರ್ ಸಿಕ್ಕಿಬಿದ್ದಿದ್ದ. ಆತನನ್ನು ವಿಚಾರಣೆಗೊಳಪಡಿಸಿದಾಗ ಕದ್ದ ಮಾಲನ್ನು ತಬಸ್ಸುಮ್ ಎಂಬ ಮಹಿಳೆಗೆ ಮಾರಾಟ ಮಾಡಿರುವುದಾಗಿ ಬಾಯ್ಬಿಟ್ಟಿದ್ದ.
ಕಿಲಾಡಿ ಲೇಡಿಯ ಹೈಟೆಕ್ ಡ್ರಾಮಾ:
ಪೊಲೀಸರು ತಬಸ್ಸುಮ್ ಮನೆಗೆ ದಾಳಿ ಮಾಡಿದಾಗ ಆಕೆ ತೀರಾ ಹೈಡ್ರಾಮಾ ಮಾಡಿದ್ದಳು. ಕಳ್ಳ ಮುದಾಸಿರ್ ತನಗೆ ನೀಡಿದ್ದ ಆಭರಣಗಳನ್ನೇ ಪೊಲೀಸರ ಕೈಗಿಟ್ಟು, “ಅವನು ಕೊಟ್ಟಿದ್ದೇ ಇಷ್ಟು” ಎಂದು ಅಮಾಯಕಳಂತೆ ನಟಿಸಿದ್ದಳು. ಆದರೆ ಪೊಲೀಸರು ಆ ಆಭರಣಗಳನ್ನು ಪರೀಕ್ಷಿಸಿದಾಗ ಅವು ಕೇವಲ ‘ರೋಲ್ಡ್ ಗೋಲ್ಡ್’ (ನಕಲಿ) ಒಡವೆಗಳೆಂದು ತಿಳಿದುಬಂದಿದೆ.
ಕಳ್ಳ ನೀಡಿದ್ದು ಅಸಲಿ ಬಂಗಾರವಾದರೆ ಈಕೆಯ ಬಳಿ ನಕಲಿ ಒಡವೆಗಳು ಹೇಗಿದ್ದವು ಎಂಬ ಸಂಶಯ ಪೊಲೀಸರಿಗೆ ಮೂಡಿತ್ತು. ತಕ್ಷಣವೇ ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ತಬಸ್ಸುಮ್ ಮಾಡಿದ್ದ ಕೃತ್ಯ ಬಯಲಾಗಿದೆ. ಈಕೆ ಕದ್ದ ಒಡವೆಗಳನ್ನು ಖರೀದಿ ಮಾಡಿದ ತಕ್ಷಣ, ಅಸಲಿ ಒಡವೆಗಳ ಮಾದರಿಯಲ್ಲೇ ಕಾಣುವ ನಕಲಿ (ರೋಲ್ಡ್ ಗೋಲ್ಡ್) ಒಡವೆಗಳನ್ನು ಮಾಡಿಸಿ ಇಟ್ಟುಕೊಳ್ಳುತ್ತಿದ್ದಳು. ಒಂದು ವೇಳೆ ಪೊಲೀಸರು ಮನೆಗೆ ಬಂದರೆ ನಕಲಿ ಒಡವೆಗಳನ್ನು ತೋರಿಸಿ ತಪ್ಪಿಸಿಕೊಳ್ಳುವುದು ಈಕೆಯ ಸಂಚಾಗಿತ್ತು.
ಆದರೆ ಆರ್.ಟಿ.ನಗರ ಪೊಲೀಸರ ಚಾಣಾಕ್ಷತನದ ಮುಂದೆ ಈಕೆಯ ಐನಾತಿ ಕೆಲಸ ನಡೆಯಲಿಲ್ಲ. ಸದ್ಯ ಇಬ್ಬರೂ ಆರೋಪಿಗಳು ಕಂಬಿ ಎಣಿಸುತ್ತಿದ್ದು, ಕಳುವಾದ 75 ಗ್ರಾಂ ಅಸಲಿ ಬಂಗಾರವನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.