Skip to main content

Police Roundup

ದಾಬಸ್‌ಪೇಟೆ ಬಳಿ ಭೀಕರ ಕೊಲೆ: ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ತಲೆಬುರುಡೆ ಪತ್ತೆ!

Share News

ದಾಬಸ್‌ಪೇಟೆ: ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರ ಕಥೆ ಅತೀ ಭೀಕರವಾಗಿ ಅಂತ್ಯಗೊಂಡಿದ್ದು, ಆಕೆಯ ತಲೆಬುರುಡೆ ಮತ್ತು ಮೂಳೆಗಳು ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನಿನಲ್ಲಿ ಪತ್ತೆಯಾಗಿವೆ. ಈ ಘಟನೆಯು ದಾಬಸ್‌ಪೇಟೆ ಹಾಗೂ ಕ್ಯಾತ್ಸಂದ್ರ ಭಾಗದ ಜನರನ್ನು ಬೆಚ್ಚಿಬೀಳಿಸಿದೆ.

 

ಮೃತ ಮಹಿಳೆಯನ್ನು ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ ನಿವಾಸಿ ಯಮುನಾ (38) ಎಂದು ಗುರುತಿಸಲಾಗಿದೆ. ರಿಲಯನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯಮುನಾ ಅವರು ಮಾರ್ಚ್ 21ರಂದು ಕೆಲಸಕ್ಕೆ ಹೋದವರು ಸಂಜೆ ಮನೆಗೆ ಮರಳಿರಲಿಲ್ಲ. ಈ ಸಂಬಂಧ ಅವರ ಪತಿ ಮಲ್ಲಿಕಾರ್ಜುನ್ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

 

ದಾಬಸ್‌ಪೇಟೆ ಬಳಿಯ ಹಳೆನಿಜಗಲ್ ಗ್ರಾಮದ ಜಮೀನೊಂದರಲ್ಲಿ ರೈತರು ಪೂಜೆ ಮಾಡಲು ಹೋದಾಗ ಅಲ್ಲಿ ಮಾನವನ ತಲೆಬುರುಡೆ ಮತ್ತು ಕಾಲಿನ ಮೂಳೆಗಳು ಕಂಡುಬಂದಿವೆ. ಜೊತೆಗೆ ಒಂದು ಬ್ಯಾಗ್, ನೀರಿನ ಬಾಟಲ್, ಬಟ್ಟೆ ಹಾಗೂ ಕಂಪನಿಯ ಐಡಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ಪತ್ತೆಯಾಗಿವೆ. ಈ ದಾಖಲೆಗಳ ಆಧಾರದ ಮೇಲೆ ಅವಶೇಷಗಳು ನಾಪತ್ತೆಯಾಗಿದ್ದ ಯಮುನಾ ಅವರದ್ದೇ ಎಂದು ಖಚಿತಪಡಿಸಿಕೊಳ್ಳಲಾಗಿದೆ.

 

ಪೊಲೀಸರು ತನಿಖೆ ಚುರುಕುಗೊಳಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮಾರ್ಚ್ 21ರಂದು ಕೆಲಸ ಮುಗಿಸಿ ಬಂದ ಯಮುನಾ ಅವರು ರಾಘವೇಂದ್ರ ಎಂಬ ವ್ಯಕ್ತಿಯ ಜೊತೆಗೆ ನಡೆದುಕೊಂಡು ಹೋಗುತ್ತಿರುವ ಕೊನೆಯ ದೃಶ್ಯ ಕಂಡುಬಂದಿದೆ. ಈತನೇ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

 

ಪೊಲೀಸ್ ಮೂಲಗಳ ಪ್ರಕಾರ, ಮೃತ ಮಹಿಳೆ ಮತ್ತು ರಾಘವೇಂದ್ರನ ನಡುವೆ ಈ ಹಿಂದೆ ಸಂಬಂಧವಿತ್ತು ಎನ್ನಲಾಗಿದೆ. ಕಳೆದ ಕೆಲವು ವರ್ಷಗಳಿಂದ ಆತನಿಂದ ದೂರವಿದ್ದ ಯಮುನಾ ಅವರಿಗೆ, ರಾಘವೇಂದ್ರನು “ಮತ್ತೆ ತನ್ನ ಬಳಿ ಬರದಿದ್ದರೆ ನಿನ್ನ ಗಂಡ-ಮಕ್ಕಳನ್ನು ಸಾಯಿಸುತ್ತೇನೆ” ಎಂದು ಬೆದರಿಕೆ ಹಾಕುತ್ತಿದ್ದನೆಂದು ತಿಳಿದುಬಂದಿದೆ. ಈ ಹಗೆತನವೇ ಕೊಲೆಯಲ್ಲಿ ಅಂತ್ಯವಾಗಿರುವ ಸಾಧ್ಯತೆಯಿದೆ.

 

ಸ್ಥಳಕ್ಕೆ ಜಿಲ್ಲಾ ಪೊಲೀಸ್ ಉಪವರಿಷ್ಠಾಧಿಕಾರಿ ವೆಂಕಟೇಶ್ ಪ್ರಸನ್ನ ಹಾಗೂ ವಿಧಿವಿಜ್ಞಾನ (FSL) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆರೋಪಿ ರಾಘವೇಂದ್ರ ಪ್ರಸ್ತುತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. 18 ವರ್ಷಗಳ ದಾಂಪತ್ಯ ಹಾಗೂ ಇಬ್ಬರು ಮಕ್ಕಳಿದ್ದ ಯಮುನಾ ಅವರ ಜೀವನ ಈ ರೀತಿ ದುರಂತ ಅಂತ್ಯ ಕಂಡಿರುವುದು ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin