Skip to main content

Police Roundup

ಸಂದೇಹಕ್ಕೆ ಬಲಿಯಾದ ಆರು ವರ್ಷದ ಕಂದಮ್ಮ: ಮಗ ತನ್ನಂತಿಲ್ಲವೆಂದು ನದಿಗೆ ತಳ್ಳಿ ಕೊಂದ ಪಾಪಿ ತಂದೆ!

Share News

ವಿಜಯಪುರ: ಕೇವಲ ಬಾಹ್ಯ ರೂಪದ ಹೋಲಿಕೆಯಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಹಾಗೂ ಹಳ್ಳಿಗರ ಚೇಷ್ಟೆಯ ಮಾತಿಗೆ ಮರುಳಾದ ತಂದೆಯೊಬ್ಬ ತನ್ನ ಆರು ವರ್ಷದ ಮಗನನ್ನೇ ನದಿಗೆ ತಳ್ಳಿ ಬರ್ಬರವಾಗಿ ಹತ್ಯೆ ಮಾಡಿದ ಅಮಾನವೀಯ ಘಟನೆ ವಿಜಯಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

​ನಾಗಠಾಣ ಗ್ರಾಮದ ಆರು ವರ್ಷದ ಬಾಲಕ ಸಿದ್ದಾರ್ಥ ಮಲ್ಲಿಕಾರ್ಜುನ ಅರಕೇರಿ ಹತ್ಯೆಯಾದ ದುರ್ದೈವಿ. ಸ್ವಂತ ಮಗನನ್ನೇ ಕೊಂದ ಆರೋಪಿ ತಂದೆ ಮಲ್ಲಿಕಾರ್ಜುನ ಅರಕೇರಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿ ಮಲ್ಲಿಕಾರ್ಜುನನಿಗೆ ತನ್ನ ಮಗ ಸಿದ್ದಾರ್ಥ ನೋಡಲು ತನ್ನಂತೆ ಇಲ್ಲ ಎಂಬ ಅಸಮಾಧಾನವಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಗ್ರಾಮದ ಕೆಲವರು “ನಿನ್ನ ಮಗ ನಿನ್ನಂತೆ ಕಾಣುತ್ತಿಲ್ಲ” ಎಂದು ನಿತ್ಯ ಚೇಡಿಸುತ್ತಿದ್ದರು ಎನ್ನಲಾಗಿದೆ. ಜನ ಆಡಿಕೊಳ್ಳುವ ಮಾತಿನಿಂದ ರೋಸಿಹೋದ ಮಲ್ಲಿಕಾರ್ಜುನ, ಮಗನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದನು.

ಕಳೆದ ಮಾರ್ಚ್ 16 ರಂದು ಮಗನನ್ನು ಶಾಲೆಗೆ ಸೇರಿಸುವುದಾಗಿ ನಂಬಿಸಿ ಮನೆಯಿಂದ ಕರೆದುಕೊಂಡು ಹೋದ ಮಲ್ಲಿಕಾರ್ಜುನ, ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿ ಎಂಬಲ್ಲಿ ಕೃಷ್ಣಾ ನದಿಗೆ ಮಗುವನ್ನು ತಳ್ಳಿ ಹತ್ಯೆ ಮಾಡಿದ್ದಾನೆ. ಬಳಿಕ ಮನೆಗೆ ವಾಪಸ್ ಬಂದು, ಮಗನನ್ನು ಸಿಂದಗಿ ಬಳಿಯ ಶಾಲೆಯ ಹಾಸ್ಟೆಲ್‌ಗೆ ಸೇರಿಸಿರುವುದಾಗಿ ಪತ್ನಿ ಭಾಗ್ಯಶ್ರೀ ಅವರನ್ನು ನಂಬಿಸಿದ್ದನು.

ಏಪ್ರಿಲ್ 1 ರಂದು ಬಾಲಕ ಸಿದ್ದಾರ್ಥನ ಹುಟ್ಟುಹಬ್ಬವಿದ್ದ ಕಾರಣ, ಮಗನನ್ನು ನೋಡಲು ತಾಯಿ ಪಟ್ಟು ಹಿಡಿದಿದ್ದಾರೆ. ಈ ವೇಳೆ ಗಾಬರಿಗೊಂಡ ಮಲ್ಲಿಕಾರ್ಜುನ ಮನೆಯಿಂದ ಓಡಿ ಹೋಗಿದ್ದಾನೆ. ಪತಿಯ ನಡವಳಿಕೆಯಿಂದ ಅನುಮಾನಗೊಂಡ ಭಾಗ್ಯಶ್ರೀ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

​ಪೊಲೀಸರು ಮಲ್ಲಿಕಾರ್ಜುನನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ಭೀಕರ ಸತ್ಯ ಹೊರಬಂದಿದೆ. ಮಾರ್ಚ್ 16 ರಂದೇ ಮಹಾರಾಷ್ಟ್ರದ ಮಸೂರು ಠಾಣೆ ಪೊಲೀಸರು ಕೃಷ್ಣಾ ನದಿಯಲ್ಲಿ ಪತ್ತೆಯಾದ ಅಪರಿಚಿತ ಬಾಲಕನ ಶವದ ಬಗ್ಗೆ ಪ್ರಕಟಣೆ ಹೊರಡಿಸಿದ್ದರು. ಮಲ್ಲಿಕಾರ್ಜುನ ನೀಡಿದ ಹೇಳಿಕೆ ಮತ್ತು ಪೊಲೀಸರ ಪ್ರಕಟಣೆಯ ಆಧಾರದ ಮೇಲೆ ಮೃತ ಬಾಲಕ ಸಿದ್ದಾರ್ಥನ ಗುರುತು ಪತ್ತೆಯಾಗಿದೆ.

​ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಸಂಶಯದ ಸುಳಿಗೆ ಸಿಲುಕಿ ಹೂವಿನಂತಿದ್ದ ಮಗುವನ್ನು ಕೊಂದ ತಂದೆಯ ಕ್ರೌರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin