ಬೀದರ್: ಮನೆಯ ಮ್ಯೂಟೇಷನ್ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ ಆಡಳಿತಾಧಿಕಾರಿ (VA) ಶಿವಕುಮಾರ್ ಅವರು ಬುಧವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ₹2.5 ಲಕ್ಷ ನಗದು ಪಡೆಯುತ್ತಿದ್ದಾಗ ದಾಳಿ ನಡೆಸಿದ ಅಧಿಕಾರಿಗಳು ಶಿವಕುಮಾರ್ ಮತ್ತು ಅವರ ಸಹಚರನನ್ನು ವಶಕ್ಕೆ ಪಡೆದಿದ್ದಾರೆ.
ಮರಕುಂದಾ ಗ್ರಾಮದ ನಿವಾಸಿ ಮಹಾದೇವ್ ಶಾಂತಪ್ಪಾ ಎಂಬುವವರು ತಮ್ಮ ಮನೆಯ ಮ್ಯೂಟೇಷನ್ (ಖಾತೆ ಬದಲಾವಣೆ) ಮಾಡಿಕೊಡುವಂತೆ ಗ್ರಾಮ ಆಡಳಿತಾಧಿಕಾರಿ ಶಿವಕುಮಾರ್ ಅವರನ್ನು ಸಂಪರ್ಕಿಸಿದ್ದರು. ಈ ಕೆಲಸಕ್ಕಾಗಿ ಶಿವಕುಮಾರ್ ಅವರು ಬರೊಬ್ಬರಿ ₹5 ಲಕ್ಷ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ಲಂಚದ ಹಣದ ಪೈಕಿ ಮೊದಲ ಕಂತಾಗಿ ₹2.5 ಲಕ್ಷ ಹಣವನ್ನು ಮರಕುಂದಾ ಗ್ರಾಮದ ಹೊರವಲಯದ ದಾಬಾವೊಂದರಲ್ಲಿ ನೀಡುವಂತೆ ಶಿವಕುಮಾರ್ ಸೂಚಿಸಿದ್ದರು. ಈ ಬಗ್ಗೆ ಮಹಾದೇವ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು.
ದಾಬಾದಲ್ಲಿ ಮಹಾದೇವ್ ಅವರಿಂದ ₹2.5 ಲಕ್ಷ ಹಣವನ್ನು ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಡಿಎಸ್ಪಿ ಹಣಮಂತರಾಯ್ ನೇತೃತ್ವದ ತಂಡ ದಾಳಿ ನಡೆಸಿ, ಶಿವಕುಮಾರ್ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದೇ ವೇಳೆ ಶಿವಕುಮಾರ್ಗೆ ಸಹಕರಿಸುತ್ತಿದ್ದ ಆತನ ಸಹಚರ ಶರಣಯ್ಯ ಎಂಬಾತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೀದರ್ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ವಿಚಾರಣೆ ಮುಂದುವರಿಸಿದ್ದಾರೆ.