Skip to main content

Police Roundup

ಎಂಟು ವರ್ಷದ ಪ್ರೇಮಕ್ಕೆ ಎಳ್ಳುನೀರು: ಲೇಡಿ ಪೇದೆ ವಿರುದ್ಧ ವಂಚನೆ ಆರೋಪ ಹೊರಿಸಿದ ಇಂಟಲಿಜೆನ್ಸ್ ಪಿಎಸ್‌ಐ!

Share News

ಯಾದಗಿರಿ: ಎಂಟು ವರ್ಷಗಳ ಕಾಲ ಪ್ರೀತಿಸಿ, ಮದುವೆಯ ಭರವಸೆ ನೀಡಿ ಈಗ ಕೈಕೊಟ್ಟಿದ್ದಾರೆ ಎಂದು ಆರೋಪಿಸಿ ಇಂಟಲಿಜೆನ್ಸ್ ಪಿಎಸ್‌ಐ ಒಬ್ಬರು ರಾಯಚೂರಿನ ಲೇಡಿ ಪೇದೆ ವಿರುದ್ಧ ನ್ಯಾಯಕ್ಕಾಗಿ ಮೊರೆ ಹೋಗಿರುವ ಘಟನೆ ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ.

 

ಇಂಟಲಿಜೆನ್ಸ್ ಪಿಎಸ್‌ಐ ವೀರೇಶ್ ಆಲೂರು ಹಾಗೂ ರಾಯಚೂರು ಗ್ರಾಮೀಣ ಠಾಣೆಯ ಲೇಡಿ ಪೇದೆ ಜಯಶ್ರೀ (ಹೆಸರು ಬದಲಾಯಿಸಲಾಗಿದೆ) ಅವರಿಗೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೋಚಿಂಗ್ ಸೆಂಟರ್‌ನಲ್ಲಿ ಪರಿಚಯವಾಗಿತ್ತು. ಈ ಸ್ನೇಹ ಕಾಲಕ್ರಮೇಣ ಪ್ರೀತಿಗೆ ತಿರುಗಿ, ಕಳೆದ ಎಂಟು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅಷ್ಟೇ ಅಲ್ಲದೆ, ಇಬ್ಬರೂ ದೀರ್ಘಕಾಲ ಲಿವ್-ಇನ್ ಸಂಬಂಧದಲ್ಲಿದ್ದರು ಮತ್ತು ರಾಯಚೂರಿನ ಬಾಲಮರೆಮ್ಮ ದೇವಸ್ಥಾನದಲ್ಲಿ ಹಾರ ಬದಲಿಸಿಕೊಂಡು ಮದುವೆಯ ಪ್ರತಿಜ್ಞೆ ಮಾಡಿದ್ದರು ಎನ್ನಲಾಗಿದೆ.

 

ಪಿಎಸ್‌ಐ ವೀರೇಶ್ ಅವರು ಈ ಸಂಬಂಧದ ಮೇಲೆ ನಂಬಿಕೆಯಿಟ್ಟು ಲೇಡಿ ಪೇದೆ ಹಾಗೂ ಅವರ ಕುಟುಂಬಕ್ಕೆ ಸುಮಾರು ₹35 ಲಕ್ಷ ಆರ್ಥಿಕ ನೆರವು ನೀಡಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ. ಮನೆ ನಿರ್ಮಾಣ, ಟ್ರಾಕ್ಟರ್ ಖರೀದಿ ಸೇರಿದಂತೆ ಹಲವು ವೈಯಕ್ತಿಕ ಕೆಲಸಗಳಿಗೆ ಹಣಕಾಸಿನ ನೆರವು ನೀಡಿದ್ದೇನೆ ಎಂದು ವೀರೇಶ್ ನೋವು ತೋಡಿಕೊಂಡಿದ್ದಾರೆ.

 

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ, ಲೇಡಿ ಪೇದೆ ಜಯಶ್ರೀ ಅವರು ವೀರೇಶ್ ಅವರೊಂದಿಗಿನ ಮದುವೆಗೆ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ, ಮೇ 7ರಂದು ರಾಯಚೂರಿನಲ್ಲಿ ಮತ್ತೊಬ್ಬ ಯುವಕನೊಂದಿಗೆ ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

ಈ ವಿವಾದವು ಪೊಲೀಸ್ ಇಲಾಖೆಯೊಳಗೆ ಸಂಚಲನ ಮೂಡಿಸಿದ್ದು, ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಮತ್ತು ಮಾಜಿ ಶಾಸಕ ಶರಣಪ್ಪ ಸುಣಗಾರ ಅವರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ನಡೆಸಲು ಪ್ರಯತ್ನಿಸಲಾಯಿತು. ಆದರೆ, ಯಾವುದೇ ಸಂಧಾನ ಸಭೆಯೂ ಫಲ ನೀಡಿಲ್ಲ. ಸದ್ಯ “ನನಗೆ ನ್ಯಾಯ ಬೇಕು” ಎಂದು ಪಿಎಸ್‌ಐ ವೀರೇಶ್ ಅವರು ಮನವಿ ಮಾಡಿದ್ದಾರೆ.

​ಇಬ್ಬರು ಪೊಲೀಸ್ ಸಿಬ್ಬಂದಿಗಳ ನಡುವಿನ ಈ ಪ್ರೇಮ ಕದನ ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin