ಆಂಧ್ರಪ್ರದೇಶ: ಮಗು ತನ್ನ ಬಣ್ಣ ಹೊಂದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಜನ್ಮ ನೀಡಿದ ತಂದೆಯೇ ತನ್ನ ಕಂದಮ್ಮನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಭೀಕರ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಮಗುವಿನ ಚರ್ಮದ ಬಣ್ಣದ ಕುರಿತು ಅನುಮಾನ ವ್ಯಕ್ತಪಡಿಸಿ ಪತ್ನಿಯ ಶೀಲವನ್ನು ಶಂಕಿಸಿದ ಈ ನರಾಧಮ, ಹಸುಗೂಸಿನ ಪ್ರಾಣವನ್ನೇ ತೆಗೆದಿದ್ದಾನೆ.
ಆರೋಪಿ ಮತ್ತು ಆತನ ಪತ್ನಿಯ ನಡುವೆ ಕಳೆದ ಕೆಲವು ದಿನಗಳಿಂದ ಮಗುವಿನ ಬಣ್ಣದ ವಿಚಾರವಾಗಿ ನಿರಂತರವಾಗಿ ಜಗಳ ನಡೆಯುತ್ತಿತ್ತು. “ಮಗು ತನ್ನಂತೆ ಕಪ್ಪಗಿಲ್ಲ, ಚರ್ಮದ ಬಣ್ಣ ಭಿನ್ನವಾಗಿದೆ; ಹೀಗಾಗಿ ಈ ಮಗು ನನಗ ಹುಟ್ಟಿದ್ದಲ್ಲ” ಎಂದು ಆರೋಪಿ ವಾದಿಸುತ್ತಿದ್ದ ಎನ್ನಲಾಗಿದೆ. ಈ ಕುರುಡು ಅನುಮಾನದ ಹಿನ್ನೆಲೆಯಲ್ಲಿ ತನ್ನ ಪತ್ನಿಯ ನಡತೆಯ ಬಗ್ಗೆಯೂ ಈತ ಸಂಶಯ ಪಡುತ್ತಿದ್ದ ಎಂದು ತಿಳಿದುಬಂದಿದೆ.
ದಂಪತಿಗಳ ನಡುವಿನ ಜಗಳ ವಿಕೋಪಕ್ಕೆ ಹೋದ ಸಂದರ್ಭದಲ್ಲಿ, ಕ್ರೂರ ಮನಸ್ಥಿತಿಯ ಈ ತಂದೆ ಏನೂ ಅರಿಯದ ಹಸುಗೂಸನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಮಗು ತನ್ನಂತೆ ಕಾಣುತ್ತಿಲ್ಲ ಎಂಬ ಒಂದೇ ಕಾರಣಕ್ಕೆ ರಕ್ಷಿಸಬೇಕಾದವನೇ ರಾಕ್ಷಸನಾಗಿ ಇಡೀ ಕುಟುಂಬವನ್ನು ಕಣ್ಣೀರಲ್ಲಿ ಮುಳುಗಿಸಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಗುವಿನ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ನೊಂದ ಪತ್ನಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ತಂದೆಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ನಾಗರಿಕ ಸಮಾಜವೇ ತಲೆತಗ್ಗಿಸುವಂತಿರುವ ಈ ಘಟನೆ ತಂದೆ-ಮಗನ ಪವಿತ್ರ ಸಂಬಂಧಕ್ಕೆ ಕಳಂಕ ತಂದಿದೆ.