ಬೆಳಗಾವಿ: ಸಂಭ್ರಮಿಸಬೇಕಾದ ಜನ್ಮದಿನದಂದೇ ಯುವತಿಯೊಬ್ಬಳು ಸಾವಿಗೆ ಶರಣಾದ ಹೃದಯವಿದ್ರಾವಕ ಘಟನೆ ನಗರದ ಅಜಂ ನಗರದಲ್ಲಿ ನಡೆದಿದೆ. ಪೊಲೀಸ್ ಕಾನ್ಸ್‌ಟೇಬಲ್ ಜೊತೆ ನಿಶ್ಚಿತಾರ್ಥವಾಗಿದ್ದ ವಿದ್ಯಾರ್ಥಿನಿ, ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ಯುವತಿಯನ್ನು ಹುಕ್ಕೇರಿ ತಾಲೂಕಿನ ಕಟಾಬಳ್ಳಿ ಗ್ರಾಮದ ಕಾವೇರಿ ಉಮೇಶ್ ನಾಯಕ (21) ಎಂದು ಗುರುತಿಸಲಾಗಿದೆ. ಈಕೆ ಅಜಂ ನಗರದಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ವಾಸ್ತವ್ಯ ಹೂಡಿದ್ದು, ಬಿಎಸ್‌ಸಿ ಅಂತಿಮ ವರ್ಷದ ವ್ಯಾಸಾಂಗ ಮಾಡುತ್ತಿದ್ದಳು.
ನಿಶ್ಚಿತಾರ್ಥ: ಕೇವಲ ಮೂರು ತಿಂಗಳ ಹಿಂದಷ್ಟೇ ಕಾವೇರಿಗೆ ಪೊಲೀಸ್ ಪೇದೆಯೊಬ್ಬರ ಜೊತೆ ಮದುವೆ ನಿಶ್ಚಯವಾಗಿ ನಿಶ್ಚಿತಾರ್ಥ ನೆರವೇರಿತ್ತು.
ಜನ್ಮದಿನದಂದೇ ಸಾವು: ಇಂದು ಕಾವೇರಿಯ ಹುಟ್ಟುಹಬ್ಬದ ಸಂಭ್ರಮವಿತ್ತು. ಮನೆಯವರು ಹಾಗೂ ಸ್ನೇಹಿತರು ಶುಭಾಶಯ ಕೋರಿ ಸಂಭ್ರಮಿಸುವ ಮೊದಲೇ ಈಕೆ ಸಾವಿನ ಹಾದಿ ಹಿಡಿದಿರುವುದು ಎಲ್ಲರನ್ನೂ ಆಘಾತಕ್ಕೀಡು ಮಾಡಿದೆ.
ನಿಗೂಢ ಕಾರಣ: ಯುವತಿಯ ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಹಾಸ್ಟೆಲ್ ಕೊಠಡಿಯಲ್ಲಿ ಯಾರೂ ಇಲ್ಲದ ವೇಳೆ ಈಕೆ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮದುವೆ ನಿಶ್ಚಯವಾಗಿ ಜೀವನದ ಹೊಸ ಹಂತಕ್ಕೆ ಕಾಲಿಡಬೇಕಿದ್ದ ಯುವತಿಯ ಈ ನಿರ್ಧಾರದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.