Skip to main content

Police Roundup

ಬೆಂಗಳೂರು: ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 70 ಕೆಜಿ ಬೆಳ್ಳಿ ಲೂಟಿ – 1.20 ಕೋಟಿ ರೂ. ಮೌಲ್ಯದ ಮಾಲು ಕಳವು

Share News

ಬೆಂಗಳೂರು: ನಗರದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಏರುತ್ತಿದ್ದಂತೆಯೇ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದ್ದು, ದಾಸರಹಳ್ಳಿಯ ಹಾವನೂರಿನಲ್ಲಿರುವ ‘ಎಂಬಿ ಜ್ಯುವೆಲ್ಲರ್ಸ್’ ಮಳಿಗೆಯ ಗೋಡೆ ಕೊರೆದ ಕಳ್ಳರು ಸುಮಾರು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳನ್ನು ದೋಚಿದ್ದಾರೆ.

 

ಕಳೆದ ಎರಡು ದಿನಗಳ ಹಿಂದೆ ಈ ಭೀಕರ ಕಳ್ಳತನ ನಡೆದಿದ್ದು, ಕಳ್ಳರು ಅತ್ಯಂತ ಯೋಜಿತವಾಗಿ ಸ್ಕೆಚ್ ಹಾಕಿದ್ದರು. ಜ್ಯುವೆಲ್ಲರಿ ಶಾಪ್‌ನ ಹಿಂಭಾಗದ ಕೊಠಡಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ನಂತರ ಮಳಿಗೆಯ ಗೋಡೆಯನ್ನು ಯಂತ್ರಗಳ ಸಹಾಯದಿಂದ ಕೊರೆದು ಒಳಪ್ರವೇಶಿಸಿದ್ದಾರೆ.

 

ಮಳಿಗೆಯಲ್ಲಿದ್ದ ಸುಮಾರು 70 ಕೆಜಿ ತೂಕದ ಬೆಳ್ಳಿ ಆಭರಣಗಳು ಹಾಗೂ ವಿವಿಧ ವಸ್ತುಗಳನ್ನು ಕದೀಮರು ದೋಚಿದ್ದಾರೆ. ಸದ್ಯದ ಮಾರುಕಟ್ಟೆ ದರದಂತೆ ಇದರ ಮೌಲ್ಯ 1.20 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಬೆಳಿಗ್ಗೆ ಮಾಲೀಕರು ಮಳಿಗೆಗೆ ಬಂದಾಗ ಗೋಡೆ ಕೊರೆದಿರುವುದು ಕಂಡುಬಂದಿದ್ದು, ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.

 

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬಾಗಲಗುಂಟೆ ಪೊಲೀಸರು ಹಾಗೂ ಶ್ವಾನದಳ ಪರಿಶೀಲನೆ ನಡೆಸಿದ್ದಾರೆ. ಮಳಿಗೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕಳ್ಳರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಕಳ್ಳರು ಗೋಡೆ ಕೊರೆಯಲು ಅನುಸರಿಸಿದ ವಿಧಾನವನ್ನು ಗಮನಿಸಿದರೆ, ಇದು ವೃತ್ತಿಪರ ಕಳ್ಳರ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ.

​ನಗರದಲ್ಲಿ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ವ್ಯಾಪಾರಿ ಸಮೂಹದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದು, ರಾತ್ರಿ ಗಸ್ತನ್ನು ಹೆಚ್ಚಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin