Skip to main content

Police Roundup

​ಶಿರಾ ತಾಲ್ಲೂಕಿನಲ್ಲಿ ಘೋರ ಕೃತ್ಯ: ಮಗಳ ಪ್ರಾಣ ತೆಗೆದು ಶವ ಹೂತಿದ್ದ ತಂದೆ ಪೊಲೀಸರ ವಶಕ್ಕೆ!

Share News

ತುಮಕೂರು: ಜಿಲ್ಲೆಯಲ್ಲಿ ಹೆತ್ತ ಕರುಳನ್ನೇ ಹಿಂಡುವಂತಹ ಅತ್ಯಂತ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ ಒಂದು ತಿಂಗಳಿನಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಹದಿಹರೆಯದ ಮಗಳನ್ನು ಆಕೆಯ ಸ್ವಂತ ತಂದೆಯೇ ಕೊಲೆ ಮಾಡಿ, ಶವವನ್ನು ಹೂತಿಟ್ಟಿರುವ ಭೀಕರ ಕೃತ್ಯ ಪೊಲೀಸರ ತನಿಖೆಯಿಂದ ಬಯಲಾಗಿದೆ.

​ಮೃತ ದುರ್ದೈವಿಯನ್ನು ೧೭ ವರ್ಷದ ಮೇಘನಾ ಎಂದು ಗುರುತಿಸಲಾಗಿದ್ದು, ಈಕೆಯ ಹೆತ್ತ ತಂದೆ ತಿಮ್ಮರಾಯಪ್ಪನೇ ಮಗಳ ಪ್ರಾಣ ತೆಗೆದ ಕಟುಕ. ಈ ಭೀಕರ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ನಿಂಬೆಮರದಹಳ್ಳಿ ಗ್ರಾಮದಲ್ಲಿ ನಡೆದಿದೆ.

 

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅಪ್ರಾಪ್ತ ಮಗಳು ಮೇಘನಾಳ ಮದುವೆ ಹಾಗೂ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಕುಟುಂಬದೊಳಗೆ ಪದೇ ಪದೇ ದೊಡ್ಡ ಮಟ್ಟದ ಜಗಳಗಳು ನಡೆಯುತ್ತಿದ್ದವು. ಇದೇ ವಿಚಾರವಾಗಿ ತೀವ್ರ ಕೋಪಗೊಂಡಿದ್ದ ತಂದೆ ತಿಮ್ಮರಾಯಪ್ಪ, ಏಪ್ರಿಲ್ ೧೬ ರಂದು ಮಗಳನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ. ಯಾರೂ ಇಲ್ಲದ ದಟ್ಟ ಪ್ರದೇಶದಲ್ಲಿ ಶವವನ್ನು ಹೂತುಹಾಕಿ ಏನೂ ತಿಳಿಯದವನಂತೆ ನಾಟಕವಾಡಿದ್ದಾನೆ. ಆತನೇ ಕೊಲೆ ಮಾಡಿದ್ದಾನೆ ಎಂಬುದಕ್ಕೆ ಸದ್ಯ ಬಲವಾದ ಪುರಾವೆಗಳು ಲಭ್ಯವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಏಪ್ರಿಲ್ ೧೬ ರಂದು ಮೇಘನಾಳ ತಾಯಿ ನಿರ್ಮಲಾ ಅವರು ಸಂಜೆ ೬:೩೦ ರ ಸುಮಾರಿಗೆ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸಾದಾಗ ಮಗಳು ಕಾಣಿಸಲಿಲ್ಲ. ಮಗಳ ಮೊಬೈಲ್ ಫೋನ್‌ಗೆ ಸತತವಾಗಿ ಕರೆ ಮಾಡಲು ಪ್ರಯತ್ನಿಸಿದರೂ ಅದು ಸ್ವಿಚ್ ಆಫ್ ಆಗಿತ್ತು. ಸುತ್ತಮುತ್ತ ಹಾಗೂ ನೆಂಟರಿಷ್ಟರ ಮನೆಯಲ್ಲಿ ಹುಡುಕಾಡಿದರೂ ಮಗಳ ಸುಳಿವು ಸಿಗದೇ ಇದ್ದಾಗ, ತಾಯಿ ನಿರ್ಮಲಾ ಅವರು ತೀವ್ರ ಅನುಮಾನಗೊಂಡು ಪೊಲೀಸರಿಗೆ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದರು.

 

ತಾಯಿಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಶಿರಾದ ಪೊಲೀಸರು, ತಂದೆ ತಿಮ್ಮರಾಯಪ್ಪನ ನಡವಳಿಕೆಯ ಮೇಲೆ ಅನುಮಾನಗೊಂಡು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಪೊಲೀಸರ ಖಾಕಿ ದೆಸೆಯ ವಿಚಾರಣೆಯ ಜಿಜ್ಞಾಸೆಗೆ ಹೆದರಿದ ಆರೋಪಿ, ಹೆತ್ತ ಮಗಳನ್ನೇ ಕೊಂದು ಶವ ಹೂತಿಟ್ಟಿರುವ ಭಯಾನಕ ಸತ್ಯವನ್ನು ಒಪ್ಪಿಕೊಂಡಿದ್ದಾನೆ.

​ಪ್ರತಿಷ್ಠೆ ಹಾಗೂ ಮದುವೆ ಎಂಬ ಹಠಕ್ಕೆ ಬಿದ್ದು ಹೆತ್ತ ಮಗಳನ್ನೇ ಬಲಿಪಡೆದ ಈ ಕಟುಕ ತಂದೆಯ ಕ್ರೌರ್ಯಕ್ಕೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದ್ದು, ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin