ಹಣದ ಆಸೆಗಾಗಿ ಹೆತ್ತವರು, ಒಡಹುಟ್ಟಿದವರು ಹಾಗೂ ಸ್ನೇಹಿತರನ್ನೇ ಕೊಲ್ಲುವ ಕಲಿಗಾಲ ಇದಾಗಿದೆ. ನಂಬಿಕೆಗೆ ದ್ರೋಹ ಬಗೆದ ಇಂತಹದ್ದೇ ಒಂದು ಬೆಚ್ಚಿಬೀಳಿಸುವ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದ್ದು, ಹಣದ ತೊಂದರೆಯಲ್ಲಿದ್ದ ಯುವತಿಯೊಬ್ಬಳು ತನ್ನದೇ ರೂಮ್‌ಮೇಟ್ ಹಾಗೂ ಆತ್ಮೀಯ ಗೆಳತಿಯನ್ನು ಕೊಲೆ ಮಾಡಲು ಯತ್ನಿಸಿ, ಚಿನ್ನಾಭರಣ ದೋಚಿದ ಆರೋಪದಡಿ ಪೊಲೀಸರ ಅತಿಥಿಯಾಗಿದ್ದಾಳೆ.
ಆರೋಪಿ ಸುಷ್ಮಾ ಎಂಬ ಯುವತಿ ತೀವ್ರ ಹಣದ ತೊಂದರೆಯಲ್ಲಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತನ್ನದೇ ಪಕ್ಕದ ರೂಮಿನಲ್ಲಿದ್ದ ಆತ್ಮೀಯ ಗೆಳತಿ ಯೋಗೀತಾ (೨೩) ಎಂಬಾಕೆಯ ಚಿನ್ನಾಭರಣ ದೋಚಲು ಸ್ಕೆಚ್ ಹಾಕಿದ್ದಾಳೆ. ಯೋಗೀತಾ ಗಾಢ ನಿದ್ರೆಯಲ್ಲಿದ್ದಾಗ, ಆರೋಪಿ ಸುಷ್ಮಾ ಕ್ರೂರವಾಗಿ ಆಕೆಯ ತಲೆಗೆ ಸಿಮೆಂಟ್ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿದ್ದಾಳೆ. ತದನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯೋಗೀತಾಳ ಕೊರಳಲ್ಲಿದ್ದ ಚಿನ್ನದ ಸರ ಮತ್ತು ಕಿವಿಯ ಓಲೆಯನ್ನು ದೋಚಿಕೊಂಡು ಪರಾರಿಯಾಗಲು ಯತ್ನಿಸಿದ್ದಾಳೆ.
ರೂಮಿನಲ್ಲಿದ್ದ ಇನ್ನುಳಿದ ಗೆಳತಿಯರು ನೈಟ್ ಶಿಫ್ಟ್ ಮುಗಿಸಿ ವಾಪಸ್ ಬಂದು ನೋಡಿದಾಗ ಯೋಗೀತಾ ತೀವ್ರ ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಆರೋಪಿ ಸುಷ್ಮಾ ತನಗೇನೂ ತಿಳಿಯದ ನಿರಪರಾಧಿಯಂತೆ ನಾಟಕವಾಡಿದ್ದಾಳೆ. ಅಷ್ಟೇ ಅಲ್ಲದೆ, ಗಾಯಾಳು ಯೋಗೀತಾಳನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಿ ಜೊತೆಯಲ್ಲೇ ಹೋಗಿದ್ದಾಳೆ. ಆಸ್ಪತ್ರೆಯಲ್ಲೂ ಸಹ ಯಾರೋ ಅಪರಿಚಿತರು ಬಂದು ಈ ಕೃತ್ಯ ಎಸಗಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿ ಪೊಲೀಸರ ಹಾದಿ ತಪ್ಪಿಸಲು ಯತ್ನಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಮಣಿಪಾಲ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ನೇತೃತ್ವದ ಚಾಣಾಕ್ಷ ತಂಡ ತಕ್ಷಣವೇ ಕಾರ್ಯಾಚರಣೆಗೆ ಇಳಿದಿದೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದಾಗ ಮತ್ತು ಆರೋಪಿ ಸುಷ್ಮಾಳ ವರ್ತನೆಯ ಮೇಲೆ ಸಂಶಯಗೊಂಡು ತೀವ್ರ ವಿಚಾರಣೆ ನಡೆಸಿದಾಗ ಅಸಲಿ ಕರಾಳ ಸತ್ಯ ಹೊರಬಂದಿದೆ. ಹಣದ ಆಸೆಗಾಗಿ ತಾನೇ ಈ ಕೃತ್ಯ ಎಸಗಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾಳೆ. ಸದ್ಯ ಆರೋಪಿತೆಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದು, ಆಕೆಯಿಂದ ಕಳವು ಮಾಡಲಾಗಿದ್ದ ಚಿನ್ನದ ಒಡವೆಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ.
ಅಪರಿಚಿತರಿಗಿಂತ ಪರಿಚಿತರೇ ಹೆಚ್ಚಾಗಿ ದ್ರೋಹ ಬಗೆಯುತ್ತಿರುವ ಇಂದಿನ ದಿನಗಳಲ್ಲಿ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬ ಯಕ್ಷಪ್ರಶ್ನೆ ಎದುರಾಗಿದೆ. ಕೇವಲ ಹಣಕ್ಕಾಗಿ ನಂಬಿದ ಗೆಳತಿಯ ಪ್ರಾಣಕ್ಕೇ ಕುತ್ತು ತಂದ ಈ ಘಟನೆ ಸಮಾಜ ತಲೆತಗ್ಗಿಸುವಂತದ್ದಾಗಿದೆ. ಪ್ರಕರಣವನ್ನು ಶೀಘ್ರವಾಗಿ ಭೇದಿಸಿದ ಮಣಿಪಾಲ ಪೊಲೀಸರ ಕಾರ್ಯ ಶ್ಲಾಘನೀಯ.