Skip to main content

Police Roundup

ಪ್ರಿಯಕರನ ಜೊತೆ ಎಸ್ಕೇಪ್ ಆಗಲು ಪತಿ ಮನೆಗೇ ಕನ್ನ ಹಾಕಿದ ನವವಿವಾಹಿತೆ! 48 ಗಂಟೆಯಲ್ಲೇ ಕಳ್ಳಾಟ ಬಯಲು

Share News

ಬೆಳಗಾವಿ: ಮದುವೆಯಾಗಿ ಹೊಸ ಜೀವನದ ಕನಸು ಕಾಣಬೇಕಿದ್ದ ಪತಿಗೆ ನವವಿವಾಹಿತೆಯೊಬ್ಬಳು ಬಿಗ್ ಶಾಕ್ ನೀಡಿದ್ದಾಳೆ. ತನ್ನ ಪ್ರಿಯಕರನ ಜೊತೆ ಓಡಿ ಹೋಗಲು ಪತಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನೇ ಕದ್ದು ಪರಾರಿಯಾದ ವಿಚಿತ್ರ ಘಟನೆಯೊಂದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ನಡೆದಿದೆ.

 

ಮೂಡಲಗಿ ತಾಲೂಕು ಮೂಲದ ಹಸೀನಾ ಎಂಬಾಕೆಗೆ ಎರಡು ತಿಂಗಳ ಹಿಂದಷ್ಟೇ ಶರೀಫ್ ಎಂಬಾತನ ಜೊತೆ ಮದುವೆಯಾಗಿತ್ತು. ಆದರೆ ಹಸೀನಾಗೆ ಮದುವೆಗೂ ಮುನ್ನವೇ ಹಣಮಂತ ಮಾರಾಪೂರ ಎಂಬುವವನ ಜೊತೆ ಪ್ರೀತಿ ಇತ್ತು. ಮದುವೆಯಾದ ಮೇಲೂ ಈ ಅಕ್ರಮ ಸಂಬಂಧ ಮುಂದುವರಿದಿದ್ದು, ಪ್ರಿಯಕರನ ಜೊತೆ ಸೇರಿ ಹೊಸ ಜೀವನ ಆರಂಭಿಸಲು ಈಕೆ ಪತಿ ಮನೆಯಲ್ಲೇ ಕಳ್ಳತನ ಮಾಡಲು ಸ್ಕೆಚ್ ಹಾಕಿದ್ದಳು.

 

ತನ್ನ ಪ್ರಿಯಕರ ಹಣಮಂತನ ಜೊತೆಗೂಡಿ ಪತಿ ಮನೆಯಲ್ಲಿದ್ದ ಸುಮಾರು 21 ಲಕ್ಷ ರೂ. ಮೌಲ್ಯದ ಚಿನ್ನಾಭರಣ (154.6 ಗ್ರಾಂ) ಹಾಗೂ 11 ಸಾವಿರ ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು (45 ಗ್ರಾಂ) ದೋಚಿಕೊಂಡು ಇಬ್ಬರೂ ನಾಪತ್ತೆಯಾಗಿದ್ದರು. ಮನೆಯಲ್ಲಿ ಕಳ್ಳತನವಾದ ಬಗ್ಗೆ ದಿಲಶಾದ್ ನದಾಫ್ ಎಂಬುವವರು ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

 

ಪ್ರಕರಣದ ಗಂಭೀರತೆ ಅರಿತ ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ ನೇತೃತ್ವದ ತಂಡ ತಕ್ಷಣ ತನಿಖೆ ಆರಂಭಿಸಿತ್ತು. ತಾಂತ್ರಿಕ ದಾಖಲೆ ಹಾಗೂ ಸುಳಿವುಗಳನ್ನಾಧರಿಸಿ ಕಳ್ಳತನ ನಡೆದ ಕೇವಲ 48 ಗಂಟೆಗಳ ಒಳಗೆ ಕಿಲಾಡಿ ನವವಿವಾಹಿತೆ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ಕದ್ದ ಮಾಲನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದೆ.

 

ಪ್ರೀತಿಗಾಗಿ ಪತಿ ಮನೆಯನ್ನೇ ಲೂಟಿ ಮಾಡಿದ ಈ ನವವಿವಾಹಿತೆಯ ಕೃತ್ಯ ಈಗ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಸದ್ಯ ಸುಖವಾಗಿರಬೇಕಾಗಿದ್ದ ಈ ಪ್ರೇಮಿಗಳಿಬ್ಬರೂ ಈಗ ಪತಿ ಮನೆಯ ಬದಲು ಜೈಲು ಪಾಲಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin